
ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಪೆಟ್ರೋಕೆಮಿಕಲ್ ಸ್ಥಾವರ ಎಂಆರ್ ಪಿಎಲ್ ನಲ್ಲಿ ಸ್ಥಳೀಯ ಉದ್ಯೋಗಿಗಳಿಗೆ ಪ್ರಾಶಸ್ತ್ಯ ನೀಡದೇ ಉತ್ತರ ಭಾರತ ಮೂಲದ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ಸ್ಥಳೀಯವಾಗಿ ಕೃಷಿಭೂಮಿಯನ್ನು ಪಡೆದು ನಿರ್ಮಾಣವಾಗಿರುವ ಎಂಆರ್ ಪಿಎಲ್ ನಲ್ಲಿ ಉದ್ಯೋಗ ನಿರ್ವಹಿಸಲು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾವಂತ ಯುವಕ ಯುವತಿಯರಿದ್ದರೂ ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳದೆ ನೇಮಕಾತಿ ಮಾಡಿರುವುದು ಖಂಡನೀಯ. ಸರೋಜಿನಿ ಮಹಿಷಿ ವರದಿಯಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕೆಂದಿದ್ದರೂ ಅದನ್ನು ಯಾಕೆ ಜಾರಿಗೆ ತರುತ್ತಿಲ್ಲ’ ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಏಳು ಮಂದಿ ಆಡಳಿತ ಪಕ್ಷ ಬಿಜೆಪಿಯ ಶಾಸಕರು, ಒಬ್ಬ ಸಂಸದರು ಇದ್ದರೂ ಈ ನೇಮಕಾತಿ ವಿರುದ್ಧ ಧ್ವನಿ ಎತ್ತದೆ ಇರುವುದು ಆಶ್ಚರ್ಯ ಮೂಡಿಸುತ್ತದೆ. ಈ ನೇಮಕಾತಿಯ ವಿರುದ್ಧ ವಕೀಲರ ಮೂಲಕ ತಡೆ ತರಲು ಯತ್ನಿಸುವುದಾಗಿ ಬಾವಾ ಹೇಳಿದ್ದಾರೆ. ಕಂಪೆನಿಯ ಈ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಾವಾ ಎಚ್ಚರಿಕೆ ನೀಡಿದ್ದಾರೆ.
ಎಂಆರ್ ಪಿಎಲ್ ನಿರ್ಮಾಣವಾಗುವ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಉದ್ಯೋಗ ನೀಡದೇ ತಾರತಮ್ಯ ಎಸಗಲಾಗಿದೆ. ಸ್ಥಳೀಯರನ್ನು ನೇಮಕಾತಿ ಮಾಡದೇ ಉತ್ತರ ಭಾರತ ಮೂಲದ ಕಾರ್ಮಿಕರನ್ನು ಭರ್ತಿ ಮಾಡಿರುವುದು ಯಾವ ನ್ಯಾಯ?.
184 ಮಂದಿಯಲ್ಲಿ ಕೇವಲ 13 ಮಂದಿ ಕರ್ನಾಟಕದ ಉದ್ಯೋಗಿಗಳನ್ನು ನೇಮಕ ಮಾಡಿದ್ದು ಅದರಲ್ಲಿ ಉಡುಪಿ, ಕಾರ್ಕಳ, ಮಂಗಳೂರಿನ ಒಬ್ಬೊಬ್ಬ ಉದ್ಯೋಗಿಯನ್ನು ಸೇರಿಸಲಾಗಿದೆ.
ಸ್ಥಳೀಯರ ಜಮೀನು ಪಡೆದು ತಲೆಯೆತ್ತಿರುವ ಎಂಆರ್ ಪಿಎಲ್ ಸ್ಥಳೀಯರಿಗೆ ತಾರತಮ್ಯ ಎಸಗುತ್ತಿದೆ. ಸ್ಥಳೀಯ ಭತ್ತದ ಗದ್ದೆಗಳಿಗೆ ಕೆಮಿಕಲ್ ತ್ಯಾಜ್ಯ ಬಿಡುತ್ತಿದ್ದು ಅದನ್ನು ಪ್ರಶ್ನಿಸುವ ಗೋಜಿಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಾವಾ ಎಚ್ಚರಿಕೆ ನೀಡಿದ್ದಾರೆ.
Comments are closed.