ಕರಾವಳಿ

ಸೋಂಕು ಹರಡುವಿಕೆಯ ಚೈನ್‌ಲಿಂಕ್ ಕಡಿತಗೊಳಿಸಲು ಟಾಸ್ಕ್ ಫೋರ್ಸ್‌ಗಳಿಗೆ ಸಚಿವ ಕೋಟ ಸೂಚನೆ

Pinterest LinkedIn Tumblr

ಮಂಗಳೂರು ಮೇ 16 : ಗ್ರಾಮೀಣ ಭಾಗದ ಕೋವಿಡ್ ಸೋಂಕು ಹರಡುವಿಕೆಯ ಚೈನ್‌ಲಿಂಕ್ ಅನ್ನು ಕಡಿತಗೊಳಿಸಿ, ಕೊರೋನಾ ನಿಯಂತ್ರಣ ಮಾಡುವ ಜವಾಬ್ದಾರಿ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯದ್ದಾಗಿದ್ದು, ಅದನ್ನು ಚಾಚೂ ತಪ್ಪದೇ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಜಿಲ್ಲಾ ಪಂಚಾಯತ್ ಕಚೇರಿಯ ವೀಡಿಯೋ ಕಾನ್ಫರೆನ್ಸ್ ಮೂಲಕ ಸುಳ್ಯ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಕೋವಿಡ್ -೧೯ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆ ಮಾತನಾಡುತ್ತಿದ್ದರು.

ಕೋವಿಡ್ 2 ನೇ ಅಲೆಯು ರೂಪಾಂತರಗೊಂಡ ಕೊರೋನಾ ಸೋಂಕು ಹರಡುವ ಪ್ರಮಾಣ ಮೊದಲನೇ ಅಲೆಗೆ ಹೋಲಿಸಿ ಕೊಂಡರೆ ಹೆಚ್ಚು ಇದೆ. ಈ ಬಾರಿ ಕೊರೋನಾ ಸೋಂಕು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ. ಸೋಂಕು ಹರಡುವಿಕೆ ಸರಪಳಿಯನ್ನು ಕಡಿತಗೊಳಿಸುವ ಕಾರ್ಯ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಿಂದ ಆಗಬೇಕು ಎಂದು ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಜನರು ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ತಪ್ಪಿದ್ದಲ್ಲಿ ಮನೆಯಲ್ಲಿಯೇ ಇರಬೇಕು. ಜನರು ಸೋಂಕಿನ ಬಗ್ಗೆ ಜಾಗೃತಿ ಹೊಂದುವುದರೊಂದಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಸೇರಿದಂತೆ ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವುದರೊಂದಿಗೆ ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ಸೋಂಕು ನಿಯಂತ್ರಣ ಕುರಿತು ಪ್ರತಿದಿನ ನಡೆಸುವ ಟಾಸ್ಕ್ ಫೋರ್ಸ್ ಸಮಿತಿಯ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬ ಸದಸ್ಯರೂ ಕೈಜೋಡಿಸುವುದರೊಂದಿಗೆ ಸಹಕಾರ ನೀಡಬೇಕು ಎಂದ ಅವರು, ಸಹಕಾರ ನೀಡದೇ ಇರುವ ಸಮಿತಿಯ ಸದಸ್ಯರುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಸೇರಿದಂತೆ ಮತ್ತಿತರ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷö್ಯ ಮಾಡದೇ ಕೂಡಲೇ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಪರೀಕ್ಷೆಯ ಫಲಿತಾಂಶ ಬರುವವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದರು.

ಸರಕಾರ ಕೋವಿಡ್‌ನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ನಿಗಧಿಪಡಿಸಿದಕ್ಕಿಂತ ಹೆಚ್ಚು ಪಡಿತರ ಆಹಾರವನ್ನು ಬಿಡುಗಡೆ ಮಾಡಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸುವ ಉಸ್ತುವಾರಿಯನ್ನು ಗ್ರಾಮ ಪಂಚಾಯತಿಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಮಾಡಬೇಕು ಎಂದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕೊರೋನಾ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಕೊಠಡಿ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕಡಿಮೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹೋಂ ಕ್ವಾರಂಟೈನ್‌ಗೆ ಹೆಚ್ಚು ಅವಕಾಶ ನೀಡದೇ ಹತ್ತಿರದ ಕೋವಿಡ್ ಕೇರ್ ಸೆಂಟರ್‌ಗೆ ಅಥವಾ ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದರು.

ಪ್ರತಿಯೊಂದು ಗ್ರಾಮ ಪಂಚಾಯತಿಗಳು, ಸಿಬ್ಬಂದಿ ಹಾಗೂ ಗ್ರಾಮ ಮಟ್ಟದ ಸಮಿತಿಗಳು ಯೋಜನೆ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿ ಕೆಲಸ ಮಾಡಿದರೆ ಕೊರೋನಾ ನಿಯಂತ್ರಣ ಸಾಧ್ಯ ಎಂದರು.
ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಜನರು ಕೊರೋನಾ ಸೋಂಕಿನ ಬಗ್ಗೆ ಹೆಚ್ಚು ಜಾಗೃತರಾದಾಗ ಮಾತ್ರ ಸೋಂಕಿನಿAದ ದೂರ ಉಳಿಯುವುದರೊಂದಿಗೆ ಕೋವಿಡ್ ಹರಡುವುದನ್ನು ತಡೆಯಲು ಸಾಧ್ಯ ಎಂದರು.

ಪಂಚಾಯತ್ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ತಂದರೆ ಕೊರೊನಾವನ್ನು ಬಹುತೇಕ ತಡೆಗಟ್ಟಬಹುದಾಗಿದ್ದು, ಕೇಂದ್ರ ಮತ್ತು ರಾಜ್ಯಸರಕಾರದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯತ್‌ಗಳು ಕರ್ತವ್ಯ ನಿರ್ವಹಿಸಿದರೆ ಉತ್ತಮ ಎಂದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಕೋವಿಡ್ ಸೋಂಕಿತರ ಮನೆಗೆ ಸಂಪರ್ಕಿಸಲು ದೂರವಿದ್ದಲ್ಲಿ ಸಂಪರ್ಕಿಸಲು ಅನುಕೂಲವಾಗಲು ಒಂದು ತಿಂಗಳ ಅವಧಿಗೆ ಬಾಡಿಗೆಯ ಆಧಾರದ ಮೇಲೆ ವಾಹನವನ್ನು ಪಡೆದುಕೊಳ್ಳಿ. 14ನೇ ಹಣಕಾಸಿನ ಅನುದಾನದಲ್ಲಿ ಇದನ್ನು ಪಾವತಿಸಬೇಕು ಎಂದ ಅವರು ಟಾಸ್ಕ್ ಫೋರ್ಸ್ ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಇದರ ಬಳಕೆ ಮಾಡಿಕೊಂಡು ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಸಭೆಯಲ್ಲಿ ಸುಳ್ಯ ತಾಲೂಕು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ, ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು ಹಾಗೂ ಗ್ರಾ.ಪಂ. ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.