ಕರಾವಳಿ

ನ್ಯಾಯಬೆಲೆ ಅಂಗಡಿಯಿಂದ ರೇಷನ್ ತರುವಾಗ ತೊಂದರೆ ಕೊಡದಂತೆ ಶಾಸಕ ಕಾಮತ್ ಸೂಚನೆ

Pinterest LinkedIn Tumblr

ಮಂಗಳೂರು, ಮೇ 12: ಲಾಕ್ ಡೌನ್ ಸಂದರ್ಭದಲ್ಲಿ ನಗರ ನ್ಯಾಯಬೆಲೆ ಅಂಗಡಿಯಿಂದ ರೇಷನ್ ಪಡೆದುಕೊಳ್ಳುವವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಿಂದ ರೇಷನ್ ತರಲು ಯಾವುದೇ ರೀತಿಯ ಸಮಸ್ಯೆ ಇಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮಾತನಾಡಿದ್ದೇನೆ.

ರೇಷನ್ ಅಂಗಡಿಗಳಲ್ಲಿ ಸಾಮಾಗ್ರಿ ಪಡೆಯುವ ಸಮಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸಹಕರಿಸುವಂತೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಪಡಿತರ ಚೀಟಿ ತೋರಿಸಿ ಹೋಗಬಹುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ನಗರದ ಪ್ರತಿ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ರಿಂದ 10 ಗಂಟೆಯ ವರೆಗೆ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗೆ 7 ಗಂಟೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಮೊದಲ 150 ಜನರಿಗೆ ಕ್ಯೂ ಸ್ಲಿಪ್ ನೀಡಲಾಗುವುದು. ಕ್ಯೂ ಸ್ಲಿಪ್ ಪಡೆದ 150 ಜನರಿಗೆ ಪಡಿತರ ವಿತರಿಸಲಾಗುತ್ತದೆ.

ಪ್ರತಿ ತಿಂಗಳ ಪಡಿತರವನ್ನು ತಿಂಗಳ ಕೊನೆಯ ದಿನದ ವರೆಗೂ ವಿತರಿಸಲಾಗುವುದು. ಈ ಕುರಿತು ಯಾವುದೇ ರೀತಿಯ ಗೊಂದಲ ಬೇಡ.ಪ್ರತಿಯೊಬ್ಬರಿಗೂ ಅವರ ಪಡಿತರವನ್ನು ಖಾತ್ರಿಪಡಿಸುತ್ತೇವೆ.

ಪಡಿತರ ಹಂಚಿಕೆ ಸಂದರ್ಭದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ಇಲಾಖೆಗೆ ಸೂಚಿಸಲಾಗಿದೆ. ಪ್ರಮುಖವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಗಮನ ಹರಿಸುವಂತೆ ಶಾಸಕ ಕಾಮತ್ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ನಿಯಮಾವಳಿಗಳನ್ನು ಪಾಲಿಸಿ. ಅನಗತ್ಯವಾಗಿ ಮನೆಯಿಂದ ಹೊರಬರದೆ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ವ್ಯವಸ್ಥೆಯ ಜೊತೆ ಕೈಜೋಡಿಸಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.

Comments are closed.