ಕರಾವಳಿ

ಲಾಕ್ ಡೌನ್ ಸಂಕಷ್ಟ: ನಿತ್ಯ ನೂರಾರು ಮಂದಿ ಬಡ ಕಾರ್ಮಿಕರ ಹಸಿವು ತಣಿಸುತ್ತಿರುವ ಯುವಕರ ತಂಡ

Pinterest LinkedIn Tumblr

ಮಂಗಳೂರು: ಇಡೀ ಭಾರತ ದೇಶವೇ ಕೊರೋನಾ ಎರಡನೇ ಅಲೆಯಿಂದಾಗಿ ಕಂಗಾಲಾಗಿದೆ. ಸರಕಾರ ಕಾಟಾಚಾರಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದೇ ದಿಕ್ಕೆಟ್ಟು ಕೂತಿವೆ.

ಇವರನ್ನೇ ನಂಬಿದ ಮನೆಮಂದಿ ಕಣ್ಣೀರಿಡುವ ಸ್ಥಿತಿ ಬಂದೊದಗಿದೆ. ಇಂತಹ ಸ್ಥಿತಿಯಲ್ಲಿ ಕೈಕಟ್ಟಿ ಕೂರದ ಯುವಪಡೆಯೊಂದು ಯಾವುದೇ ಪ್ರಚಾರ ಬಯಸದೆ ನಿತ್ಯ ನೂರಾರು ಮಂದಿಯ ಹಸಿವು ತಣಿಸುತ್ತಿದೆ. ಸಮಾಜದಲ್ಲಿ ಯಾರೂ ಹಸಿದಿರಬಾರದು ಎಂಬ ಏಕೈಕ ಉದ್ದೇಶದಿಂದ ಹಸಿದವರಿಗೆ ಅನ್ನ ನೀಡುತ್ತಿರುವ ಯುವಕರು ಅದರಲ್ಲೇ ಸಂತೃಪ್ತಿ ಕಾಣುತ್ತಿದ್ದಾರೆ.

ಕಳೆದ ವರ್ಷ ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನ ಮೊದಲ ದಿನದಿಂದ ಸಮಾನಮನಸ್ಕ ಯುವಕರ ತಂಡ ಈ ಕಾರ್ಯವನ್ನು ಪ್ರಾರಂಭಿಸಿದೆ. ಅಲ್ಲಿಂದ ಶುರುವಾದ ಈ ಕಾಯಕ ಈ ವರ್ಷ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿಯೂ ಮುಂದುವರಿದಿದೆ.

ತಂಡದಲ್ಲಿ ಓರ್ವರಾದ ರಕ್ಷಿತ್ ಸಾಲಿಯಾನ್ ಅವರು, “ನಮ್ಮ ಏಕೈಕ ಉದ್ದೇಶವೆಂದರೆ ಈ ಸಮಯದಲ್ಲಿ ಯಾರೂ ಕೂಡಾ ಹಸಿದಿರಬಾರದು. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ 15,000ಕ್ಕೂ ಹೆಚ್ಚು ಆಹಾರದ ಪ್ಯಾಕ್‌ಗಳು ಜೊತೆಗೆ ನೀರಿನ ಬಾಟಲಿಗಳು, 250ಕ್ಕಿಂತಲೂ ಜಾಸ್ತಿ ರೇಷನ್ ಕಿಟ್‌ಗಳನ್ನು ಹಂಚಲಾಗಿದ್ದು ಈ ಬಾರಿಯೂ ಅದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ ಮತ್ತು ನಗರದಾದ್ಯಂತ ಅಗತ್ಯವಿರುವವರಿಗೆ ನೀಡಲಾಗುತ್ತದೆ” ಎಂದು ಹೇಳುತ್ತಾರೆ.

ಈ ವರ್ಷ ತಂಡವು ನಿರ್ದಿಷ್ಟವಾಗಿ ಅಂಗವಿಕಲರನ್ನು ಗುರುತಿಸಿ ಆಹಾರವನ್ನು ನೀಡುತ್ತಿದೆ. ಏಪ್ರಿಲ್ 29 ರಿಂದ ಹಸಿವು ನೀಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಕಳೆದ 10 ದಿನಗಳಿಂದ ನಿರಂತರ ಹಸಿದವರ ಹೊಟ್ಟೆ ತುಂಬಿಸುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಸಾರ್ವಜನಿಕರು ದೇಣಿಗೆ ರೂಪದಲ್ಲಿ ಯುವಕರ ತಂಡಕ್ಕೆ ನೇರವಾಗುತ್ತಿದ್ದು ಜಾತಿ ಧರ್ಮ ಎಂದು ಸಮಾಜವನ್ನು ಒಡೆಯುವ ಜನರ ಮಧ್ಯೆ ಎಲ್ಲರೂ ನಮ್ಮವರೇ ಎಂಬ ಸಂದೇಶ ಸಾರುತ್ತಿದ್ದಾರೆ.

ತಂಡದಲ್ಲಿ ಜೋಶುವಾ ಡಿಸೋಜಾ, ಸಂಜಯ್ ಕಾಮತ್, ಚೈತನ್ಯ, ಹರಿಪ್ರಸಾದ್, ರಾಹುಲ್ ಪೈ, ಮಹೇಶ್, ನಿತಿನ್ ಮಾಡ, ಅರುಣ್ ಪೈ, ಅಜಿತ್ ಕಾಮತ್, ಸಂದೇಶ್, ಆಯುಷ್ಮಾನ್ ಅಮೀನ್, ಪುಣಿಕ್ ಶೆಟ್ಟಿ ಮೊದಲಾದ ಉತ್ಸಾಹಿ ತರುಣರಿದ್ದಾರೆ.

 

Comments are closed.