ಕರ್ನಾಟಕ

ಮನೆಯಲ್ಲಷ್ಟೇ ಮದುವೆ, 40 ಮಂದಿಗೆ ಮಾತ್ರವೇ ಅವಕಾಶ-ಮದುವೆ ಸಮಾರಂಭಗಳಿಗೆ ಹೊಸ ರೂಲ್ಸ್ ಜಾರಿ

Pinterest LinkedIn Tumblr

ಬೆಂಗಳೂರು: ಈಗಾಗಲೇ ನಿಗದಿಯಾದ ಮದುವೆಗಳನ್ನು ಮನೆಗಳಲ್ಲಿ ಮಾತ್ರ ನಡೆಸುವಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

(ಸಾಂದರ್ಭಿಕ ಚಿತ್ರ)

ಅಲ್ಲದೆ, ಮದುವೆಗೆ ಕುಟುಂಬದ ಆಪ್ತರು ಸೇರಿ ಕೇವಲ 40 ಜನರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಕಲ್ಯಾಣ ಮಂಟಪ ಅಥವಾ ಸಭಾಂಗಣದಲ್ಲಿ ಮದುವೆ ಸಮಾರಂಭ ನಡೆಸುವಂತಿಲ್ಲ ಎಂದು ಆದೇಶ ಹೇಳಿದೆ. ಈ ಕುರಿತು ಪರಿಷ್ಕೃತ ಆದೇಶವನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಎನ್‌. ಮಂಜುನಾಥ ಪ್ರಸಾದ್‌ ಶನಿವಾರ ಹೊರಡಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಬಂಧಿಸಿದ ಜಂಟಿ ಆಯುಕ್ತರಿಂದ ಹಾಗೂ ಜಿಲ್ಲೆಗಳಲ್ಲಿ ಆಯಾ ವ್ಯಾಪ್ತಿಯ ತಹಶೀಲ್ದಾರ್‌ಗಳಿಂದ ಮದುವೆ ಆಮಂತ್ರಣದ ಜೊತೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಈ ಅರ್ಜಿ ಆಧರಿಸಿ 40 ಪಾಸ್‌ಗಳನ್ನು ವಿತರಿಸಲಾಗುವುದು. ಈ ಪಾಸ್‌ ಇದ್ದವರಿಗೆ ಮಾತ್ರ ಮದುವೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದು’ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಜಿ ಪಡೆದು ವಲಯ ಆಯುಕ್ತರು ಅಥವಾ ತಹಸೀಲ್ದಾರ್‌ ಅವರು ಮದುವೆಗೆ ಅನುಮತಿಯೊಂದಿಗೆ 40 ಪಾಸುಗಳನ್ನು ವಿತರಿಸುತ್ತಾರೆ. ಕಡ್ಡಾಯವಾಗಿ ಮನೆಯ ಬಳಿಯೇ ಮದುವೆ ಮಾಡಬೇಕು. ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯುವಂತಿಲ್ಲ. ಮದುವೆಗೆ ಆಗಮಿಸುವವರು ಕಡ್ಡಾಯವಾಗಿ ಪಾಸನ್ನು ತೆಗೆದುಕೊಂಡೇ ಬರಬೇಕು. ಒಬ್ಬರ ಪಾಸನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವಂತಿಲ್ಲ. ಜತೆಗೆ ಕೊರೋನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

 

Comments are closed.