ಕರಾವಳಿ

ಸಿಸಿಬಿ ಕಾರ್ಯಾಚರಣೆ : ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರು ಮಂದಿ ಬುಕ್ಕಿಗಳ ಬಂಧನ – ನಗದು, ಸೊತ್ತು ವಶ

Pinterest LinkedIn Tumblr

ಮಂಗಳೂರು, ಮೇ 4: ಮಂಗಳೂರು ನಗರ ಸಿಸಿಬಿ ಮತ್ತು ಇಕೊನಾಮಿಕ್ ಆಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರು ಮಂದಿ ಬುಕ್ಕಿಗಳನ್ನು
ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಶೋಕ್ ನಗರದ ಪ್ರೀತೇಶ್ ಯಾನೆ ಪ್ರೀತಂ, ಉರ್ವ ಮಾರಿಗುಡಿಯ ಅವಿನಾಶ್, ಮುಂಬೈಯ ಹರೀಶ್ ಶೆಟ್ಟಿ, ಸೋಮೇಶ್ವರ ಕುಂಪಲದ ವಿಕ್ರಂ, ಕೃಷ್ಣಾಪುರದ ಧನಪಾಲ್ ಶೆಟ್ಟಿ, ಮೂಲತಃ ರಾಜಸ್ಥಾನದ ಪ್ರಸ್ತುತ ಸುರತ್ಕಲ್‌ನಲ್ಲಿ ವಾಸವಾಗಿರುವ ಕಮಲೇಶ್ ಎಂದು ಹೆಸರಿಸಲಾಗಿದೆ.

ಬಂಧಿತ ಆರೋಪಿಗಳು ಮೊಬೈಲ್ Appಗಳಾದ Star App , Lotus book247 betಗಳಲ್ಲಿ ಐಪಿಎಲ್ ಬೆಟ್ಟಿಂಗ್ ದಂದೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬುಕ್ಕಿಗಳು ಬೇರೆಯವರ ಹೆಸರಿನಲ್ಲಿ ನಗರದ ಆಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಬಾಜಿದಾರರಿಂದ ಆನ್‌ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಕುಂಪಲದ ವಿಕ್ರಂನನ್ನು ಎಪ್ರಿಲ್ 21ರಂದು ವಶಕ್ಕೆ ಪಡೆದು ವಿಚಾರಿಸಲಾಯಿತು. ಆತ ನೀಡಿದ ಮಾಹಿತಿಯಂತೆ ಎಪ್ರಿಲ್ 26ರಂದು ಕೃಷ್ಣಾಪುರದ ಧನಪಾಲ ಶೆಟ್ಟಿ ಮತ್ತು ರಾಜಸ್ಥಾನ ಮೂಲದ ಕಮಲೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು.

ಎಪ್ರಿಲ್ 30ರಂದು ಪ್ರಮುಖ ಆರೋಪಿಗಳಾದ ಹರೀಶ್ ಶೆಟ್ಟಿ, ಪ್ರೀತೇಶ್ ಯಾನೆ ಪ್ರೀತಂ, ಅವಿನಾಶ್‌ರನ್ನು ವಿಶಾಖಪಟ್ಟಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿ 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ 20 ಲಕ್ಷ ರೂ. ಮತ್ತು 3 ಲಕ್ಷ ರೂ. ನಗದು ಹಾಗೂ ಆನ್‌ಲೈನ್ ಗೇಮ್‌ಗಾಗಿ ಬಳಸುತ್ತಿದ್ದ 10 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಉಪ ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ ಗಾಂವ್ಕರ್ ಅವರ ನಿರ್ದೆಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ನಾರ್ಕೊಟಿಕ್ ಕ್ರೈಂ ಠಾಣೆಯ ಎಸ್ಸೈ ಸತೀಶ್ ಎಂಪಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Comments are closed.