ಕರಾವಳಿ

ಕಾರ್ಪೊರೇಟರ್ ಗಣೇಶ್ ಕುಲಾಲ್‌ರಿಂದ ಅನಾಥ ಮೃತದೇಹಗಳಿಗೆ ಅಂತ್ಯಸಂಸ್ಕಾರ: 2 ವಾರಗಳಲ್ಲಿ 12ಮೃತದೇಹಗಳಿಗೆ ಅಂತ್ಯಕ್ರಿಯೆ

Pinterest LinkedIn Tumblr

ಮಂಗಳೂರು: ಕೊರೊನಾ ಸೋಂಕು ಇಡೀ ಜಗತ್ತನ್ನು ತನ್ನ ಕಬಂಧಬಾಹುವಿನಿಂದ ಬಂಧಿಸಿದ ಬಳಿಕ ಮೃತಪಡುವವರ ಸಂಖ್ಯೆ ಅಧಿಕವಾಗುತ್ತಿದ್ದು, ಇಂತಹ ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬರುವವರ ಸಂಖ್ಯೆ ವಿರಳವಾಗುತ್ತಿದೆ.

ಸ್ವತಃ ರಕ್ತಸಂಬಂಧಿಗಳೇ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನೆರವೇರಿಸದೆ ಮೃತದೇಹವನ್ನು ಅನಾಥರನ್ನಾಗಿಸಿದ ಅನೇಕ ಪ್ರಕರಣಗಳು ಸುದ್ದಿಯಾಗುತ್ತಿದೆ.

ಇಂತಹ ಅಮಾನವೀಯ ಜನರ ನಡುವೆಯೂ ಮಂಗಳೂರು ಮನಪಾ ಕಾರ್ಪೊರೇಟರೊಬ್ಬರು ವಾರಸುದಾರರಿಲ್ಲದ, ಅಂತ್ಯಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದ ಇಂತಹ ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ಕಾರ್ಪೊರೇಟರ್ ಗಣೇಶ್ ಕುಲಾಲ್

ಮಂಗಳೂರು ಮಹಾನಗರ ಪಾಲಿಕೆಯ 26ನೇ ನೈರುತ್ಯ ವಾರ್ಡ್ ದೇರೆಬೈಲ್ ನ ಕಾರ್ಪೊರೇಟರ್ ಆಗಿರುವ ಗಣೇಶ್ ಕುಲಾಲ್ ಎಂಬವರು ಕಳೆದ ಎರಡು ವಾರಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ. ಇವರು ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈವರೆಗೆ ಗಣೇಶ್ ಕುಲಾಲ್ ಅವರು ಅಂತ್ಯಸಂಸ್ಕಾರ ನೆರವೇರಿಸಿರುವ 12 ಮೃತದೇಹಗಳಲ್ಲಿ 9 ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರೆನ್ನುವುದು ಮತ್ತೊಂದು ವಿಶೇಷ. ಉಳಿದ ಮೂರು ಮಂದಿ ಸಾಮಾನ್ಯ ಮೃತಪಟ್ಟವರು.

ಇದರಲ್ಲಿ ಕೇರಳ ರಾಜ್ಯದ ಹಾಗೂ ಮಡಿಕೇರಿ ಜಿಲ್ಲೆಯ ವಾರಿಸುದಾರರಿಲ್ಲದ, ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದೆ ಬಾರದ ಎರಡು ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮತ್ತೆಲ್ಲ ಮೃತದೇಹವೂ ಮಂಗಳೂರು ತಾಲೂಕಿಗೆ ಸಂಬಂಧಪಟ್ಟವರದ್ದೇ ಆಗಿದೆ.

12ರಲ್ಲಿ ಐವರು ಮಹಿಳೆಯರಾಗಿದ್ದು, ಉಳಿದ ಏಳು ಮಂದಿ ಪುರುಷರಾಗಿದ್ದಾರೆ.‌ ಈ ಮೃತದೇಹಗಳನ್ನು ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದ್ದಾರೆ.

ದ.ಕ.ಜಿಲ್ಲೆಯ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಾರ್ ರೂಂನ ಜವಾಬ್ದಾರಿಯನ್ನೂ ಹೊಂದಿರುವ ಗಣೇಶ್ ಕುಲಾಲ್ ಅವರು, ಬರೀ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾತ್ರವಲ್ಲದೆ, ಅಗತ್ಯವಿರುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ, ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಉಚಿತ ವ್ಯವಸ್ಥೆಯನ್ನು ಕೆಲವರಿಗೆ ನೆರವೇರಿಸಿದ್ದಾರಂತೆ. ಇಂತಹ ಅನೇಕ ಕರೆಗಳೂ ಅವರಿಗೆ ಬರುತ್ತಿದ್ದು, ಎಲ್ಲದ್ದಕ್ಕೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರಂತೆ.

ಕೊರೊನಾ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದಿರುವ ಈ ಕಾಲದಲ್ಲಿ, ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರ ಮಾನವೀಯ ಕಾರ್ಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.