ಕರಾವಳಿ

ಮಂಗಳೂರಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ :ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಸೂಚನೆ

Pinterest LinkedIn Tumblr

 

ಮಂಗಳೂರು, ಎಪ್ರಿಲ್ 22 : ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಿಂದ ಜಪ್ಪು ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಮುಖಾಂತರ ಮಾರ್ಗನ್ಸ್ ಗೇಟ್ ಜಂಕ್ಷನ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಕಾಮಗಾರಿ ಮುಕ್ತಾಯವಾಗುವವರೆಗೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಾಮಾವಳಿಗಳು 1989 ರ ನಿಯಮ 221 ರ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಎಪ್ರಿಲ್ 21 ರಿಂದ ಜೂನ್ 19 ರ ವರೆಗೆ 60 ದಿನಗಳ ಕಾಲ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಶಶಿಕುಮಾರ್ ಎನ್. ಆದೇಶಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ:

ಎನ್‍ಹೆಚ್ 66 ಮಹಾಕಾಳಿಪಡ್ಪು ಜಂಕ್ಷನ್‍ನಿಂದ ಮಾರ್ಗನ್ಸ್ ಗೇಟ್ ಜಂಕ್ಷನ್ ವರೆಗೆ, ಘನ ಸರಕು ವಾಹನ ಮತ್ತು ಬಸ್ಸುಗಳು ಸಂಚಾರವನ್ನು ನಿಷೇಧಿಸಲಾಗಿದೆ. ಘನ ವಾಹನಗಳು ಎನ್‍ಹೆಚ್ 66 ರಲ್ಲಿ ಮುಂದುವರಿದು ಪಂಪ್‍ವೆಲ್-ಕಂಕನಾಡಿ-ವೆಲೆನ್ಸಿಯಾ-ಕೋಟಿಚೆನ್ನಯ ವೃತ್ತ-ಕಾಸಿಯಾ ಜಂಕ್ಷನ್-ಜಪ್ಪು ಭಗಿನಿ ಸಮಾಜ ರಸ್ತೆ ಮಾರ್ಗವಾಗಿ ಮುಂದುವರಿದು ಬೋಳಾರ ರಸ್ತೆ ಮೂಲಕ ಸಂಚರಿಸುವುದು.

ಪಾಲಿಕೆ ವ್ಯಾಪ್ತಿಯ ಮಿಷನ್ ಸ್ಟ್ರೀಟ್ ರಸ್ತೆ ಹಾಗೂ ಎಂ.ಪಿ.ಟಿ. ರಸ್ತೆಯಲ್ಲಿ ಕಾಮಗಾರಿ: ಎಪ್ರಿಲ್ 21 ರಿಂದ ಮೇ 20 ರವರೆಗೆ 30 ದಿನಗಳ ಕಾಲ ಮಿಷನ್ ಸ್ಟ್ರೀಟ್ ರಸ್ತೆ ಹಾಗೂ ಎಂ.ಪಿ.ಟಿ. ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ:

ಸ್ಟೇಟ್‍ಬ್ಯಾಂಕ್ ನಿಂದ ಮಿಷನ್ ಸ್ಟ್ರೀಟ್ ರಸ್ತೆ ಮೂಲಕ ಬಂದರು, ಕುದ್ರೋಳಿ ಹಾಗೂ ಸುಲ್ತಾನ್ ಬತ್ತೇರಿ ಕಡೆಗೆ ಸಂಚರಿಸುವ ರೂಟ್ ಬಸ್ಸುಗಳು ಹಾಗೂ ಇತರ ಎಲ್ಲಾ ವಾಹನಗಳು ನೆಲ್ಲಿಕಾಯಿ ರಸ್ತೆ – ಬದ್ರಿಯಾ ಜಂಕ್ಷನ್ – ಬಂದರ್ ಜಂಕ್ಷನ್ ರಸ್ತೆ ಮೂಲಕ ಕುದ್ರೋಳಿ – ಸುಲ್ತಾನ್ ಬತ್ತೇರಿ ಕಡೆಗೆ ಸಂಚರಿಸುವುದು.

ಕುದ್ರೋಳಿ – ಸುಲ್ತಾನ್ ಬತ್ತೇರಿ ಕಡೆಯಿಂದ ಸ್ಟೇಟ್‍ಬ್ಯಾಂಕ್ ಕಡೆಗೆ ಸಂಚರಿಸುವ ರೂಟ್ ಬಸ್ಸುಗಳು ಹಾಗೂ ಇತರ ಎಲ್ಲಾ ವಾಹನಗಳು ಬಂದರ್ ಜಂಕ್ಷನ್ – ಬದ್ರಿಯಾ ಜಂಕ್ಷನ್ – ಸ್ಟೇಟ್‍ಬ್ಯಾಂಕ್ ಮುಖೇನಾ ಸ್ಟೇಟ್‍ಬ್ಯಾಂಕ್ ಬಸ್ಸು ನಿಲ್ದಾಣ ಕಡೆಗೆ ಸಂಚರಿಸುವುದು.

ಬಂದರ್ ಜಂಕ್ಷನ್ ನಿಂದ ಬದ್ರಿಯಾ ಜಂಕ್ಷನ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಕಾಮಗಾರಿ ಮುಗಿಯುವವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಎಂ.ಪಿ.ಟಿ. ರಸ್ತೆಯಿಂದ ಬೇಬಿ ಅಲಾಬಿ ರಸ್ತೆಯಿಂದ ಹಾಗೂ ಅಜುಜುದ್ದೀನ್ ರಸ್ತೆಯಿಂದ ಮಿಷನ್ ಸ್ಟ್ರೀಟ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೆನರಾ ಗೂಡ್ಸ್ ಅಡ್ಡ ರಸ್ತೆಯ ಮೂಲಕ ಬಂದರ್ ಜಂಕ್ಷನ್ – ಬದ್ರಿಯಾ ಜಂಕ್ಷನ್ ಮುಖೇನ ಸಂಚರಿಸುವುದು.

ಪಾಲಿಕೆ ವ್ಯಾಪ್ತಿಯ ಜೆ.ಎಂ 4 ನೇ ಅಡ್ಡ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ: ಎಪ್ರಿಲ್ 21 ರಿಂದ ಮೇ20 ರವರೆಗೆ 30 ದಿನಗಳ ಕಾಲ ಜೆ.ಎಂ 4 ನೇ ಅಡ್ಡ ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ:

ಕಾಮಗಾರಿ ನಡೆಸುವ ವೇಳೆ ಜೆ.ಎಂ 4ನೇ ಅಡ್ಡರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರ್ಯಾಯವಾಗಿ ವಾಹನಗಳು ಜುಮ್ಮಾ ಮಸೀದಿ 3ನೇ ಅಡ್ಡ ರಸ್ತೆ , ಜುಮ್ಮಾ ಮಸೀದಿ 5ನೇ ಅಡ್ಡ ರಸ್ತೆ , ಜುಮ್ಮಾ ಮಸೀದಿ ರಸ್ತೆ ಹಾಗೂ ಅಜೀಜುದ್ದೀನ್ ಕ್ರಾಸ್ ರಸ್ತೆಗಳ ಮೂಲಕ ಸಂಚರಿಸುವುದು. ಈ ವಾಹನ ಸಂಚಾರ ನಿಷೇಧವು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.

Comments are closed.