ಕರಾವಳಿ

ಬಿಡಾಡಿ ಗೋವುಗಳ ಕದಿಯುವ ಖತರ್ನಾಕ್ ಟೀಂನಲ್ಲಿದ್ದ ಓರ್ವನನ್ನು ಬಂಧಿಸಿದ ಬೈಂದೂರು ಸಿಪಿಐ ತಂಡ

Pinterest LinkedIn Tumblr

ಕುಂದಾಪುರ: ರಸ್ತೆ ಬದಿಯಲ್ಲಿ ಮಲಗುವ ಬಿಡಾಡಿ ಗೋವುಗಳಿಗೆ ಬ್ರೆಡ್ ಪೀಸ್ ಹಾಕಿ ಅವುಗಳನ್ನು ಕಾರಿನಲ್ಲಿ ಕದ್ದೊಯ್ಯುವ ಖತರ್ನಾಕ್ ತಂಡದ ಓರ್ವ ಆರೋಪಿಯನ್ನು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿದ್ದು ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ (24) ಬಂಧಿತ ಆರೋಪಿಯಾಗಿದ್ದು ಕಾರು ಚಾಲಕ ಸದಾಫ್, ವಾಯಿದ್, ಸಿಯಾನ್ ಪರಾರಿಯಾದವರು.

 

ಕ್ಷಿಪ್ರ ಕಾರ್ಯಾಚರಣೆ..
ಶನಿವಾರ ತಡರಾತ್ರಿ ಪೊಲೀಸರಿಗೆ ಬಂದ ಖಚಿತ ವರ್ತಮಾನದಂತೆ ರಸ್ತೆ ಬದಿಯ ಜಾನುವಾರುಗಳನ್ನು ಕಳವು ಮಾಡಿ‌ ಕಾರಿನಲ್ಲಿ ಸಾಗಿಸಲಾಗುತ್ತಿದೆ ಎನ್ನುವ ಹಿನ್ನೆಲೆ ಬೈಂದೂರು ಸಿಪಿಐ ಹಾಗೂ ಸಿಬ್ಬಂದಿಗಳು ಕೆ.ಎ. 20 ಪಿ 4227 ನೋಂದಣಿಯ ಕೆಂಪು ಬಣ್ಣದ ಜೆನ್ ಕಾರೊಂದನ್ನು ಬೆನ್ನು ಹತ್ತಿದ್ದರು. ಈ‌ ನಡುವೆ ಸಿಪಿಐ ಅವರು ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಹೈವೇ ಪಟ್ರೋಲ್ ವಾಹನಕ್ಕೆ ಮಾಹಿತಿ ನೀಡಿ ನಾಕಾಬಂದಿ ಹಾಕಿದ್ದರು. ಜಾನುವಾರು‌ ಕಳವುಗೈದು ಅತಿ ವೇಗವಾಗಿ ಬಂದ ಜೆನ್ ಕಾರು ನಿಯಂತ್ರಣ ತಪ್ಪಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊವಾಡಿ ಕ್ರಾಸ್ ಬಳಿ ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದು ನಿಂತಾಗಿ ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದು ಮುಜಾಫರ್ ಎನ್ನುವಾತನನ್ನು ಬಂಧಿಸಲಾಗಿದೆ. ತಾವು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಜಾನುವಾರು ಕದ್ದು ಸಾಗಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾ‌ನೆ. ಇವರು ಬ್ರೆಡ್ ಪೀಸ್ ಹಾಕಿ‌ ಜಾನುವಾರು ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆದು ಎರಡು‌ ಜಾನುವಾರು ರಕ್ಷಿಸಲಾಗಿದೆ.

(ಡಿವೈಎಸ್ಪಿ ಶ್ರೀಕಾಂತ್)

(ಸಿಪಿಐ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್, ಸಿಪಿಐ ಜೀಪು ಚಾಲಕ ಚಂದ್ರಶೇಖರ್)

ಡಿವೈಎಸ್ಪಿ, ಸಿಪಿಐ ನೇತೃತ್ವದ ಕಾರ್ಯಾಚರಣೆ…
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಬೈಂದೂರು ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಎಸ್., ಬೈಂದೂರು ಠಾಣೆಯ ಸಿಬ್ಬಂದಿ ನಾಗರಾಜ್, ಬೈಂದೂರು ಸಿಪಿಐ ಇಲಾಖಾ ಜೀಪು ಚಾಲಕ ಚಂದ್ರಶೇಖರ್, ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಕುಂದಾಪುರ ಸಂಚಾರಿ ಠಾಣೆ ಎಎಸ್ಐ ಶ್ರೀಧರ್, ಚಾಲಕ ಅಶ್ರಫ್ ಈ ಕಾರ್ಯಾಚರಣೆಯಲ್ಲಿದ್ದರು. ಶ್ರೀಕಾಂತ್ ಅವರು ಕುಂದಾಪುರ ಉಪವಿಭಾಗಕ್ಕೆ ಡಿವೈಎಸ್ಪಿ ಆಗಿಯೂ ಬೈಂದೂರು ಸಿಪಿಐ ಆಗಿ ಸಂತೋಷ ಕಾಯ್ಕಿಣಿ ಅಧಿಕಾರ ವಹಿಸಿಕೊಂಡ ಬಳಿಕ ಇವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಹಾಗೂ ಬೈಂದೂರು ಪಿಎಸ್ಐ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಗೋ ಕಳ್ಳರನ್ನು ಬಂಧಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಇಲಾಖೆಯನ್ನು ಪ್ರಶಂಸಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.