ಕರಾವಳಿ

ಏಪ್ರಿಲ್.8-9: ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ -ಕೋವಿಡ್ ನಿಯಮ ಪಾಲನೆಗೆ ವಿಶೇಷ ಆದ್ಯತೆ – 150 ಎಕರೆ ಪ್ರದೇಶದಲ್ಲಿ ಸಕಲ ವ್ಯವಸ್ಥೆ

Pinterest LinkedIn Tumblr

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಕುಟುಂಬದ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಏ.8 ಮತ್ತು ಏ.9ರಂದು ಧರ್ಮ ನೇಮೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಏ.8 ಮತ್ತು 9ರಂದು ಉಳ್ಳಾಕುಳು, ಗ್ರಾಮ ದೈವಶ್ರೀ ಅಬ್ಬೆಜಲಾಯ, ರಕ್ತೇಶ್ವರೀ ಮತ್ತು ಧರ್ಮದೈವ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ಬಂಬಿಲಗುತ್ತು, ಮೇಗಿನ ಕುಂಜಾಡಿ, ಕೆಳಗಿನ ಕುಂಜಾಡಿ ಮಧ್ಯಸ್ಥರ ನೇತೃತ್ವದಲ್ಲಿ ನಡೆಯಲಿದೆ ಎಂದವರು ತಿಳಿಸಿದರು.

ಏ.8ರಂದು ಪೂರ್ವಾಹ್ನ 11 ಗಂಟೆಗೆ ಉಳ್ಳಾಕುಳು, ಗ್ರಾಮದೈವ, ಧರ್ಮದೈವ ಪಿಲಿಚಾಮುಂಡಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ಆಗಮನವಾಗಲಿದೆ. ರಾತ್ರಿ 7.30ರಿಂದ ನೇಮೋತ್ಸವ ನಡೆಯಲಿದೆ. ಎ.೯ರಂದು ಬೆಳಗ್ಗೆ 6 ಗಂಟೆಗೆ ಅಭಯ ಪ್ರದಾನ, ಸಂಜೆ 5 ಗಂಟೆಯಿಂದ ನೇಮೋತ್ಸವ ನಡೆದು ಎ. 10ರಂದು ಬೆಳಗ್ಗೆ 6 ಗಂಟೆಗೆ ಅಭಯ ಪ್ರದಾನ ನಡೆಯಲಿದೆ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ಕುಂಜಾಡಿ ಕುಟುಂಬದ ಸಂಕಲ್ಪದಂತೆ ಈ ಸೇವೆಯನ್ನು ಮಾಡಲಾಗುತ್ತಿದೆ. ಕುಟುಂಬದ ದೈವದ ಜೊತೆಗೆ ಗ್ರಾಮದ ದೈವಗಳಿಗೂ ಧರ್ಮನೇಮವನ್ನು ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ 12 ವರ್ಷಗಳಿಗೊಮ್ಮೆ ಧರ್ಮ ನೇಮೋತ್ಸವ ನಡೆಸಲಾಗುತ್ತದೆ. ಆದರೆ ಕುಂಜಾಡಿ ತರವಾಡು ಮನೆಯಲ್ಲಿ 60 ವರ್ಷಗಳ ಬಳಿಕ ಈ ನೇಮೋತ್ಸವ ನಡೆಸಲಾಗುತ್ತಿದೆ ಎಂದರು.

150 ಎಕರೆ ಪ್ರದೇಶದಲ್ಲಿ ವ್ಯವಸ್ಥೆ:

ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಹೀಗೆ ಕೋವಿಡ್ ಕುರಿತ ಸರ್ಕಾರದ ನಿಯಮ ಪಾಲನೆಯೊಂದಿಗೆ ಈ ನೇಮೋತ್ಸವ ನಡೆಯಲಿದೆ. 150 ಎಕರೆ ಪ್ರದೇಶದಲ್ಲಿ ನೇಮೋತ್ಸವಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನ ಸಂತರ್ಪಣೆ ವೇಳೆ ತಲಾ 500 ಮಂದಿಯಂತೆ ಹಲವು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದರು.

ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ,ಕೋವಿಡ್ ತಪಾಸಣಾ ವ್ಯವಸ್ಥೆ, ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವವರಿಗೆ ವ್ಯಾಕ್ಸಿನ್ ವ್ಯವಸ್ಥೆ, ಆಂಬ್ಯುಲೆನ್ಸ್, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇರಲಿವೆ. ಮಾಸ್ಕ್‌ಧರಿಸದೇ ಬಂದರೆ ಮಾಸ್ಕ್ ನೀಡಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಅಲ್ಲಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಹಿನ್ನೆಲೆಯಲ್ಲಿ ನಿಗದಿತ ಯಕ್ಷಗಾನ ಬಯಲಾಟ ಹಾಗೂ ಯಕ್ಷಗಾನ ತಾಳಮದ್ದಳೆಯನ್ನು ಹೊರತುಪಡಿಸಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಬಂಟ್ವಾಳ ಪುರಸಭಾ ಅಧ್ಯಕ್ಷ ದೇವದಾಸ ಶೆಟ್ಟಿ, ಧರ್ಮನೇಮೋತ್ಸವ ಸಮಿತಿಯ ಸಂಚಾಲಕ ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು.

Comments are closed.