ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2020ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿ ದಿನ ಪತ್ರಿಕೆಯ ಮಂಗಳೂರಿನ ವರದಿಗಾರ ಪ್ರದೀಶ್. ಎಚ್.ಮರೋಡಿ ಆಯ್ಕೆಯಾಗಿದ್ದಾರೆ.
2020ರ ಜೂನ್ 25ರಂದು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಪತ್ರಕರ್ತ ಪ್ರದೀಶ್ .ಎಚ್.ಮರೋಡಿ ಅವರ ‘ಕೇಳುತ್ತಿಲ್ಲ ಮಲೆಯ ಮಕ್ಕಳ ಅಳಲು ‘ಎಂಬ ವರದಿಯು ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ ಆಯ್ಕೆಯಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ, ಸಂಶೋಧಕರು ಹಾಗೂ ಪುತ್ತೂರು ಡಾ.ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ ಕೇನಾಜೆ, ಮತ್ತು ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೆ.ಬಿ. ಕಿಕ್ಕೇರಿ ನೇತೃತ್ವದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.
ಪ.ಗೋ.ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 30ರಂದು ಬೆಳಗ್ಗೆ 11:00ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷ ತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಚಯ: ಪ್ರಜಾವಾಣಿ ದಿನಪತ್ರಿಕೆಯ ಮಂಗಳೂರು ಕಚೇರಿಯಲ್ಲಿ ಉಪಸಂಪಾದಕ/ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಪ್ರದೀಶ್ ಎಚ್. ಮರೋಡಿ ಅವರು ಪತ್ರಿಕೆ/ಮಾಧ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
2007ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿರುವ ಅವರು ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ ವರದಿಗಾರ (4 ವರ್ಷ), ಕಸ್ತೂರಿ ನ್ಯೂಸ್ ವಾಹಿನಿಯಲ್ಲಿ ಉಪಸಂಪಾದಕ (6 ತಿಂಗಳು), ಪಬ್ಲಿಕ್ ಟಿವಿಯಲ್ಲಿ ಉಪಸಂಪಾದಕರಾಗಿ (ಒಂದೂವರೆ ವರ್ಷ) ಸೇವೆ ಸಲ್ಲಿಸಿದರು.
2013ರಲ್ಲಿ ಪ್ರಜಾವಾಣಿಯ ವರದಿಗಾರ/ ಉಪಸಂಪಾದಕರಾಗಿ ಸೇರ್ಪಡೆಗೊಂಡು 2 ವರ್ಷ ಮೈಸೂರಿನಲ್ಲಿ ಇದೀಗ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ, ಮಾನವೀಯ, ಕೃಷಿ, ಸಿನಿಮಾ ವರದಿಗಾರಿಕೆ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ. ಎಂ.ಎ (ಎಂಸಿಜೆ), ಬಿ.ಎಡ್ ಪದವೀಧರರು.
ಪ.ಗೋ. ಪ್ರಶಸ್ತಿಗೆ ಆಯ್ಕೆಯಾಗಿರುವ ವರದಿ ‘ಕೇಳುತ್ತಿಲ್ಲ ಮಲೆ ಮಕ್ಕಳ ಅಳಲು’ (ಪ್ರಜಾವಾಣಿ, ಜೂನ್ 25, 2020).