ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನ 3082 ಹೊಸ ಕೋವಿಡ್ ಪ್ರಕರಣ ಪತ್ತೆ; 12 ಸಾವು; ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ CM ನೇತೃತ್ವದಲ್ಲಿ ಮಹತ್ವದ ಸಭೆ

Pinterest LinkedIn Tumblr

ಬೆಂಗಳೂರು: ನಾಲ್ಕು ತಿಂಗಳ ನಂತರ ರಾಜ್ಯದಲ್ಲಿ ಭಾನುವಾರ ಒಂದೇ ದಿನ 12 ಸಾವು, 3 ಸಾವಿರದ 82 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೇ ಪಾಸಿಟಿವ್ ಕೇಸ್ ಗಳ ಸಂಖ್ಯೆ 9, 87,012ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12, 504 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 23, 037ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಂಕು ಹರಡುತ್ತಿರುವುದಕ್ಕೆ ರೂಪಾಂತರಗೊಂಡ ಸಾರ್ಸ್ ಕೋವ್-2 ವೈರಸ್ ಕಾರಣವಾಗಿದೆ. ದೈನಂದಿನ ಪ್ರಕರಣಗಳ ಸಂಖ್ಯೆ 300ರಿಂದ 3 ಸಾವಿರಕ್ಕೆ ಅಂದರೆ ಹತ್ತು ಪಟ್ಟು ಹೆಚ್ಚಾಗಿದೆ. ಗಡಿ ಜಿಲ್ಲೆಗಳು ಮತ್ತು ಬೆಂಗಳೂರಿಗೆ ಬರುವವರಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಭಾನುವಾರ ಚರ್ಚೆ ನಡೆಸಲಾಗಿದೆ. ಮುಂದಿನ 4ರಿಂದ 8 ವಾರಗಳ ಕಾಲ ಕಠಿಣ ಕ್ರಮ ಕೈಗೊಳ್ಳುವಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಇಂದು ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ, ಸಚಿವರಿಗೆ ಈ ವಿಷಯವನ್ನು ತಿಳಿಸಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಪ್ರಮುಖ ಕ್ಯಾಬಿನೆಟ್ ಸಚಿವರು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯ ಮುಖ್ಯಸ್ಥರು ಪಾಲ್ಗೊಳ್ಳಲಿದ್ದು, ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.

Comments are closed.