ಕರಾವಳಿ

ಕುಲಪತಿ ಸ್ಥಾನ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ಹಣ ವಂಚನೆ : ಸಂಘಟನೆ ಮುಖಂ,ಡ ಪ್ರಸಾದ್ ಅತ್ತಾವರ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್.29: ಭಾರೀ ಪ್ರಮಾಣದ ಹಣ ವಂಚನೆ ಪ್ರರಣಕ್ಕೆ ಸಂಬಂಧಿಸಿ ಕುಡುಪು ಕಟ್ಟೆ ಬಳಿಯ ನಿವಾಸಿ ಶ್ರೀ ರಾಮ ಸೇನೆಯ ಮಾಜಿ ಮುಖಂಡ ಪ್ರಸಾದ್ (40) ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸಾದ್ ಅತ್ತಾವರ್ ವ್ಯಕ್ತಿಯೊಬ್ಬರಿಗೆ ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ ಭಾರೀ ಪ್ರಮಾಣದ ಹಣ ಪಡೆದು ವಂಚನೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಮಂಗಳೂರು ವಿವಿಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಎಂಬವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು.

ವಿವೇಕ್ ಆಚಾರ್ಯ ಅವರಿಗೆ ಮಂಗಳೂರು ಅಥವಾ ರಾಯಚೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುವ ಆಮಿಷವೊಡ್ಡಿ 17.5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ ಬಗ್ಗೆ ಪ್ರಸಾದ ಅತ್ತಾವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಸಾದ ಅತ್ತಾವರನನ್ನು ಬಂಧಿಸಿದ್ದಾರೆ.

ಕುಲಪತಿ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದ ವಿವೇಕ್ ಆಚಾರ್ಯ ಅದಕ್ಕಾಗಿ ಲಾಬಿ ನಡೆಸಿದ್ದರು. ಈ ವೇಳೆ, ಪ್ರಸಾದ್ ಅತ್ತಾವರ ತಾನು ಸಿಎಂ ಜೊತೆಗೆ ನಂಟು ಹೊಂದಿರುವುದಾಗಿ ಹೇಳಿಕೊಂಡು 15 ಲಕ್ಷ ಮತ್ತು ತನಗೆ ಅದಕ್ಕಾಗಿ ಓಡಾಡಲೆಂದು ಮತ್ತೆ ಎರಡೂವರೆ ಲಕ್ಷ ಹಣ ಪಡೆದಿದ್ದ. ಹಣ ಪಡೆದು ವರ್ಷದ ಮೇಲಾದರೂ ಭರವಸೆ ಈಡೇರದ ಕಾರಣ ವಿವೇಕ್ ಆಚಾರ್ಯ ಠಾಣೆಗೆ ದೂರು ನೀಡಿದ್ದಾರೆ.

ಪ್ರಸಾದ್ ಅತ್ತಾವರ ವಿರುದ್ಧ ಬಂದರು, ಕದ್ರಿ ಮತ್ತು ಕಂಕನಾಡಿ ಠಾಣೆಗಳಲ್ಲಿ ಹಲವು ಕೇಸುಗಳು ದಾಖಲಾಗಿದ್ದು, ಮಂಗಳೂರು ಉತ್ತರ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Comments are closed.