ಕರಾವಳಿ

ಜೆಪ್ಪು ಮಹಾಕಾಳಿ ಪಡ್ಪು ಬಳಿ 49.95 ಕೋಟಿ ರೂ.ಗಳ ರಸ್ತೆ ಕಾಮಗಾರಿಗೆ ಸಂಸದ ನಳಿನ್ ಚಾಲನೆ

Pinterest LinkedIn Tumblr

ಮಂಗಳೂರು: ಸರ್ಕಾರದಿಂದ ಸಿಗುವ ಅನುದಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಇದು ಜನಸಾಮಾನ್ಯರಿಗೆ ಉಪಯೋಗವಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ನಗರದ ಜೆಪ್ಪು ಮಹಾಕಾಳಿ ಪಡ್ಪು ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜೆಪ್ಪು ರಾಷ್ಟ್ರೀಯ ಹೆದ್ದಾರಿ 66 ರಿಂದ ಮೋರ್ಗನ್ಸ್ ಗೇಟ್ ಜಂಕ್ಷನ್ ವರೆಗೆ ಮಹಾಕಾಳಿಪಡ್ಪು RUB ಮುಖಾಂತರ ಸಂಪರ್ಕ ರಸ್ತೆ ನಿರ್ಮಿಸುವ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಕಾಮಗಾರಿಯನ್ನು 49.95 ಕೋಟಿ ರೂಗಳಲ್ಲಿ ಕೈಗೊಳ್ಳಲಾಗುತ್ತಿದೆ. ರಸ್ತೆಯು ಸುಮಾರು 4.50 ಮೀಟರ್ ರಿಂದ 6.0 ಮೀಟರ್ ಅಗಲ ಇದ್ದೂ, ಪ್ರತಿದಿನ ಹಲವಾರು ಘನ ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿದ್ದು ರಸ್ತೆಯು ತುಂಬಾ ಕಿರಿದಾಗಿರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ ಆದ್ದರಿಂದ, ವಾಹನ ಸವಾರರಿಗೆ ತುಂಬಾ ಕಷ್ಟವಾಗುತ್ತಿದೆ ಎಂದರು.

ಈ ಸಮಸ್ಯೆಗಳನ್ನು ಸರಿಪಡಿಸುವ ಸಲುವಾಗಿ ಈ ರಸ್ತೆಯನ್ನು 18 ಮೀಟರ್ ಅಗಲದಲ್ಲಿ ವಿಸ್ತರಿಸಿ ನಾಲ್ಕು ಪಥದ ಕಾಂಕ್ರಿಟ್ ರಸ್ತೆ, ದಾರಿದೀಪಗಳು, ಎರಡು ಭಾಗಗಳಲ್ಲಿ ಮಳೆ ನೀರು ಚರಂಡಿ ರಚಿಸುವುದು, ತಗ್ಗುಪ್ರದೇಶದ ಭಾಗದಲ್ಲಿ ಆರ್.ಸಿ.ಸಿ ತಡೆಗೋಡೆ ಸೇರಿದಂತೆ ಮತ್ತಿತರ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಳ್ಳುವುದರೊಂದಿಗೆ ವಾಹನಗಳ ಸುಗಮಸಂಚಾರಕ್ಕೆ ಅನುಕೂಲವಾಗುವಂತೆ ಈ ಕಾಮಗಾರಿ ಆಗುತ್ತಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯಾಗಬೇಕಾದರೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು ಹಾಗೂ ಸ್ಮಾರ್ಟ್ ಸಿಟಿಯ ಅನುದಾನವನ್ನು ಸಮರ್ಪಕವಾಗಿ ಬೆಳೆಸಿಕೊಂಡು ನಗರವನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಬೇಕು ಎಂದರು.

ಅಭಿವೃದ್ಧಿಯ ಕೆಲಸವಾಗುವ ಸಮಯದಲ್ಲಿ ಜನಸಾಮಾನ್ಯರು ಸಹಕಾರ ನೀಡಬೇಕು ಹಾಗೂ ನಗರಕ್ಕೆ ಹೆಬ್ಬಾಗಿಲ ನಂತಿರುವ ಮಹಾಕಾಳಿ ಪಡ್ಪು ರಸ್ತೆಯ ಕಾಮಗಾರಿ ಆದಷ್ಟು ಬೇಗ ನೆರವೇರಲಿ ಎಂದರು.

ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಜೆಪ್ಪು ರಾಷ್ಟ್ರೀಯ ಹೆದ್ದಾರಿ 66 ರಿಂದ ಮೋರ್ಗನ್ ಗೇಟ್ ಜಂಕ್ಷನ್ ವರೆಗೆ ಮಹಾಕಾಳಿಪಡ್ಪು ಆರ್.ಯು.ಬಿ ಮುಖಾಂತರ ಸಂಪರ್ಕ ರಸ್ತೆ ನಿರ್ಮಿಸುವ ಕಾಮಗಾರಿ 12 ತಿಂಗಳ ಅವಧಿಯಲ್ಲಿ ಪರಿಪೂರ್ಣವಾಗುವುದರ ಜೊತೆಗೆ ಜನಸಾಮಾನ್ಯರ ಪರದಾಟವನ್ನು ನಿವಾರಿಸುತ್ತದೆ ಎಂದರು.

ಮಹಾನಗರ ಪಾಲಿಕೆಯ ಸದಸ್ಯರುಗಳು ನಿರಂತರವಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಜನರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ ಸಭೆಗಳನ್ನು ಕರೆಯುವ ಮೂಲಕ ತೊಂದರೆಗಳನ್ನು ನಿವಾರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯಿಂದ ಉಪಮೇಯರ್ ಸುಮಂಗಳ ರಾವ್, ಪಾಲಿಕೆ ಸದಸ್ಯೆ ಭಾನುಮತಿ, ಪಾಲಿಕೆ ಸದಸ್ಯ ಶೈಲೇಶ್ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್, ಹಾಗೂ ಮತ್ತಿತರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Comments are closed.