ಕರಾವಳಿ

ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚನೆ

Pinterest LinkedIn Tumblr

ಮಂಗಳೂರು, ಮಾರ್ಚ್ 18 : ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೇಸಿಗೆಯಲ್ಲಿ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಜನರಿಗೆ ನೀರಿನ ಸಮಸ್ಯೆ ಆಗದಂತೆ ನೊಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಅವರು ನಗರದ ಜಿಲ್ಲಾ ಪಂಚಾಯತ್‍ನ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂಬರುವ ಎಪ್ರಿಲ್ ಮೇ ತಿಂಗಳುಗಳಲ್ಲಿ ಗ್ರಾಮೀಣ ಭಾಗದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಉಳ್ಳಾಲ ನಗರಸಭೆ ಕೋಟೆಕಾರ್ ಪಟ್ಟಣ ಪಂಚಾಯತ್ ಸೇರಿದಂತೆ ಈ ವ್ಯಾಪ್ತಿಯ ಮಾರ್ಗ ಮಧ್ಯದಲ್ಲಿ ಬರುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 24 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ನೇತ್ರಾವತಿ ನದಿ ನೀರಿನ ಮೂಲವನ್ನಾಧರಿಸಿ ಕೈರಂಗಳದ ಬಳಿ ನಿರ್ಮಿಸಲಾಗುತ್ತಿರುವ 72 ಎಮ್ ಎಲ್ ಡಿ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕದಿಂದ ಬಲ್ಕ್ ವಾಟರ್‍ನ್ನು ಸರಬರಾಜು ಮಾಡುವ ಯೋಜನೆಗಳನ್ನು ರೂ. 249 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದರು.

ಈ ಯೊಜನೆಯಿಂದಾಗಿ 24 ಗ್ರಾಮಗಳಿಗೆ 85 ಎಲ್ ಪಿ ಸಿ ಡಿ ನೀರಿನ ಬೇಡಿಕೆ ಇದ್ದು ಇದರನ್ವಯ ಮಂಗಳೂರಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗವು ಅಂದಾಜು ಮೊತ್ತ 83.33 ಕೋಟಿ ಯನ್ನು ತಯಾರಿಸಿ ಸಲ್ಲಿಸಿದ್ದು, ಈ ಪ್ರಸ್ತಾವನೆಗೆ ನೇತ್ರಾವತಿ ನದಿ ಮೂಲವನ್ನು ಆಧರಿಸಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಯಾವುದೇ ಸಮಸ್ಯೆ ಎದುರಾಗದೇ ಇರುವುದನ್ನು ಮನಗಂಡು ಪ್ರಸ್ತಾವನೆಯನ್ನು ಅನುಮೋಧಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಈ ಯೋಜನೆಯಿಂದ ಮೂಡ ವ್ಯಾಪ್ತಿಗೆ ಬರುವ ಸೋಮೇಶ್ವರ, ಕೊಣಾಜೆ, ಬೆಳ್ಮ, ಆಂಬ್ಲ ಮೊಗರು, ಹರೇಕಳ, ಮುನ್ನೂರು, ಕಿನ್ಯ ಮತ್ತು ತಲಪಾಡಿ ಹಾಗೂ ಸಜಿಪ ಮೂಡ, ಸಜಿಪ ಪಡು, ನರಿಂಗಾನ, ಕೈರಂಗಳ, ಪಜೀರು, ಇರಾ, ಕಾರ್ನಾಡು, ಬಾಳೆಪುಣಿ, ಚೇಳೂರು, ಬೋಳಿಯಾರು, ಪಾವೂರು ಹಾಗೂ ಮಂಜನಾಡಿ ಸೇರಿದಂತೆ ಹೆಚ್ಚುವರಿಯಾಗಿ ಬೋಳಂತೂರು, ಸಜಿಪ ಮುನ್ನೂರು , ಮಂಚಿ ಹಾಗೂ ವೀರಕಂಭ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಲಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗಕ್ಕೆ ಎಸ್ ಟಿ ಪಿ ಹಾಗೂ ಟಿ ಎಸ್ ಪಿ ಯೋಜನೆಯ ಅನುಧಾನದಲ್ಲಿ ಸುಳ್ಯಾದ ಗ್ರಾಮೀಣ ಭಾಗದ ವಿದ್ಯಾರ್ಥಿ ನಿಲಯಕ್ಕೆ ಬಟ್ಟೆ ಒಗೆಯುವ ಯಂತ್ರಗಳನ್ನು ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ನಿರ್ದೇಶಕಿ ಹೇಮಲತಾ ಬಿ.ಎಸ್, ಜಂಟಿ ಕೃಷಿ ನಿರ್ದೇಶಕಿ ಸೀತಾ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ ಗೋಪಿ ಆರ್,ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿ ಬಿ.ಮಂಜುನಾಥ್, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.