ಕರಾವಳಿ

ವ್ಯವಹಾರಗಳಲ್ಲಿ ವಂಚಿತರಾಗದೆ ಇರಲು ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿತಿರಬೇಕು: ಕೆ. ದಯಾನಂದ್ ಪೈ

Pinterest LinkedIn Tumblr

ಮಂಗಳೂರು, ಮಾರ್ಚ್ 16 : ಮಾರುಕಟ್ಟೆ ವ್ಯವಹಾರಗಳಲ್ಲಿ ಗ್ರಾಹಕರೇ ದೇವರು ಎಂಬ ಮಾತಿನಂತೆ ಗ್ರಾಹಕರು ಮಾರುಕಟ್ಟೆ ವ್ಯವಹಾರಗಳಲ್ಲಿ ವಂಚಿತರಾಗದೆ ಇರಲು ತಮ್ಮ ಹಕ್ಕುಗಳ ಬಗ್ಗೆ ತಿಳಿದು ಕೊಂಡಿರಬೇಕು ಎಂದು ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕರಾದ ಕೆ. ದಯಾನಂದ್ ಪೈ ತಿಳಿಸಿದರು.

ಅವರು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಬೆಸೆಂಟ್ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಇಂದಿನ ಮಾರುಕಟ್ಟೆಯಲ್ಲಿ ಗ್ರಾಹಕರ ಮೇಲಿನ ಗೌರವ ಕಡಿಮೆಯಾಗಿದೆ. ಹಿರಿಯರಿಗಿಂತ ಯುವಕರೇ ಹೆಚ್ಚಾಗಿ ದಿನಸಿ ಅಂಗಡಿಗಳಿಗೆ ತೆರಳಿ ವ್ಯವಹರಿಸುತ್ತಿರುವುದು ಶ್ಲಾಘನೀಯ ಎಂದರು.

ಗ್ರಾಹಕರು ಹಾಗೂ ವ್ಯಾಪಾರಿಗಳು ಸರಿಯಾಗಿ ವ್ಯವಹರಿಸಿದರೆ ಮಾತ್ರ ಲಾಭ ನಷ್ಟಗಳು ಸರಿಹೊಂದುತ್ತವೆ. ವ್ಯಾಪಾರಿಗಳು ಅಥವಾ ಉದ್ಯಮಿಗಳು ಗ್ರಾಹಕರೊಂದಿಗೆ ಉತ್ತಮವಾಗಿ ಸ್ಪಂದಿಸಬೇಕು. ವ್ಯಾಪಾರಿಗಳು ಉತ್ತಮ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಸರಿಯಾದ ದರದಲ್ಲಿ ನೀಡಬೇಕು ಎಂದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಕುಮಾರಿ ರಮ್ಯ ಸಿ.ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನತೆಗೆ ಗ್ರಾಹಕರ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಹಕರ ವೇದಿಕೆಯನ್ನು ಕಲ್ಪಿಸಿ, ಅದರ ಮೂಲಕ ಗ್ರಾಹಕರ ಹಕ್ಕು ಮತ್ತು ಮಾಹಿತಿ ಅರಿವು ಕಾರ್ಯಕ್ರಮ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಬೇಕು. ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಪ್ರಶ್ನಿಸಿದಾಗ ಅಂಗಡಿ ಮಾಲೀಕರು ಎಚ್ಚೆತ್ತುಕೊಂಡು ಗ್ರಾಹಕರಿಗೆ ಸರಿಯಾದ ವಸ್ತುಗಳನ್ನು ನೀಡಲು ಮುಂದಾಗುತ್ತಾರೆ ಎಂದರು.

ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇಂತಹ ಪ್ರಕರಣಗಳು ನಡೆಯದಂತೆ ಜಾಗೃತಿ ವಹಿಸಬೇಕು. ಅಂಗಡಿ ಮಾಲಕರಿಂದ ವಂಚಿತರಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ(ರಿ) ಅಧ್ಯಕ್ಷರಾದ ಎಂ.ಜೆ. ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಹಕರು ಅವರ ಹಕ್ಕಿನ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ವಸ್ತುಗಳನ್ನು ಖರೀದಿಸುವಾಗ ಅತೀ ಜಾಗರೂಕತೆಯಿಂದ ವ್ಯವಹರಿಸಬೇಕು. ಖರೀದಿಸುವ ಸಾಮಾಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿ ಅದು ಮೌಲ್ಯಧಾರಿತ ವಸ್ತುವಾಗಿದ್ದಲ್ಲಿ ಮಾತ್ರ ಖರೀದಿಸಬೇಕು. ವಸ್ತುವಿನ ಗುಣಮಟ್ಟದ ಬಗ್ಗೆ ಪ್ರಶ್ನಿಸುವ ಎಲ್ಲಾ ಹಕ್ಕು ಗ್ರಾಹಕರಿಗಿದೆ ಎಂದರು.

ಗ್ರಾಹಕರ ವೇದಿಕೆಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ.ಯು. ತಾರಾ ರಾವ್, ಮಂಗಳೂರು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರು ಅರುಣಾ ಪಿ. ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬೆಸೆಂಟ್ ಕಾಲೇಜು ಪ್ರಾಂಶುಪಾಲರಾದ ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಕ್ಷಾ ನಿರೂಪಿಸಿದರು.

Comments are closed.