ಕರಾವಳಿ

ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಬೇಕು : ಮೀನಾಕ್ಷಿ ಶಾಂತಿಗೋಡು

Pinterest LinkedIn Tumblr

ಮಂಗಳೂರು ಮಾರ್ಚ್ 16 : ಮಹಿಳೆ ಕೌಟುಂಬಿಕ ಜವಬ್ದಾರಿ ನಿಭಾಯಿಸುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಈ ಕ್ರೀಡಾ ಕೂಟ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ಅವರು ನಗರದ ಮಂಗಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ರವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಹಿಳಾ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತರಾಗದೇ ಕ್ರೀಡಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದ ಅವರು ಸರ್ಕಾರದಿಂದ ಅನುಷ್ಠಾನಗೊಂಡಿರುವ ಹಲವಾರು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ಪಡೆದು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಮಹಿಳೆ ತನ್ನ ದೈನಂದಿನ ಜೀವನದ ಒತ್ತಡಗಳ ನಡುವೆ ಯೋಗ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.

ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ತೋರ್ಪಡಿಸಲು ಈ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ ಎಂದ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಮಹಿಳೆ ರಾಷ್ಟ್ರಮಟ್ಟದಲ್ಲೂ ಕಾಣಿಸಿಕೊಳ್ಳುವಂತಾಗಲಿ ಎಂದರು.

ಮಹಿಳೆಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಅವಕಾಶವನ್ನು ಮಹಿಳೆ ಪಡೆಯುವಂತಾಗಲಿ ಎಂದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಹಲವಾರು ಪ್ರತಿಭಾವಂತ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂದರು.

ಸರ್ಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜದ ಸುಧಾರಣೆ ಮಾಡುವಲ್ಲಿ ಮಹಿಳೆಯ ಪಾತ್ರ ಅಪಾರವಾದದ್ದು, ಮುಂದಿನ ದಿನಗಳಲ್ಲಿ ಮಹಿಳೆ ಕ್ರೀಡಾ ಕ್ಷೇತ್ರದಲ್ಲಿ ಸಾಧಕಿಯಾಗಿ ಎಲ್ಲರಿಗೂ ಪ್ರೇರಣೆ ತುಂಬುವಂತಾಗಲಿ ಎಂದರು.

ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಕಂಡುಬರುತ್ತಿದೆ, ಆದರೂ ಕ್ರೀಡಾ ಕ್ಷೇತ್ರದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಮಹಾನಗರಪಾಲಿಕೆ ಸದಸ್ಯೆ ಸಂದ್ಯ ಎಮ್ ಆಚಾರ್, ಸಹಾಯಕ ಕ್ರೀಡಾ ಅಧಿಕಾರಿ ವಿನೋದ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.