ಕರಾವಳಿ

ನಗರದ ವಿವಿಧೆಡೆಗಳಲ್ಲಿ ಪಾರ್ಕ್ ಮಾಡಿದ ಕಾರಿನ ಗಾಜು ಹೊಡೆದು ಲೂಟಿ : ತಮಿಳುನಾಡು ತಂಡದ ಕೃತ್ಯ ಶಂಕೆ?

Pinterest LinkedIn Tumblr

ಮಂಗಳೂರು, ಮಾರ್ಚ್.12 : ನಗರದ ವಿವಿಧೆಡೆಗಳಲ್ಲಿ ಪಾರ್ಕ್ ಮಾಡಿದ ಕಾರಿನ ಬಾಗಿಲಿನಿ ಕಿಟಕಿ ಗಾಜು ಹೊಡೆದು ಕಾರಿನಿಂದ ನಗದು ಹಾಗು ಮತ್ತಿತ್ತರ ವಸ್ತುಗಳನ್ನು ದೋಚುವ ತಂಡವೊಂದು ನಗರದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಶಿವರಾತ್ರಿ ದಿನವಾದ ಗುರುವಾರ ಒಂದೇ ದಿನ ನಗರದ ಪ್ರತ್ಯೇಕ ಸ್ಥಳಗಳಲ್ಲಿ ಇಂತಹ ಘಟನೆ ನಡೆದಿದೆ.

ಮೊದಲನೇ ಘಟನೆ ನಗರದ ಉರ್ವ ಚಿಲಿಂಬಿ ಮೋರ್ ಮಳಿಗೆಯ ಬಳಿ ನಡೆದಿದೆ. ಮಾ.11ರ ಗುರುವಾರ ಮಧ್ಯಾಹ್ನದ ಸುಮಾರಿಗೆ ನಗರದ ಉರ್ವ ಚಿಲಿಂಬಿ ಮೋರ್ ಮಳಿಗೆಯ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಅದರೊಳಗಿದ್ದ 40 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ, 20 ಸಾವಿರ ನಗದು, ಪಾಸ್ ಪೋರ್ಟ್, ಪ್ರಮುಖ ದಾಖಲೆ ಪತ್ರಗಳು ಹಾಗು ಮತ್ತಿತ್ತರ ವಸ್ತುಗಳನ್ನು ದೋಚಲಾಗಿದೆ.

ಮೂಡುಶೆಡ್ಡೆಯ ಚೇತನ್ ಕುಮಾರ್ ಕದ್ರಿ ಅವರು ಹಣ ಮತ್ತು ಇತರ ಸೊತ್ತು ಕಳೆದುಕೊಂಡವರು. ಚೇತನ್ ಕುಮಾರ್ ಕದ್ರಿ ಅವರು ಪತ್ನಿಯ ಜೊತೆ ಸಾಯಿಬಾಬಾ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುವಷ್ಟರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಕಾರಿನ ಎಡಬದಿಯ ಹಿಂಬದಿಯ ಗಾಜನ್ನು ಒಡೆದು ಕಳ್ಳರು ಕಾರಿನ ಒಳಗಡೆ ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಬ್ಯಾಗನಲ್ಲಿ ನಗದು, ವಿದೇಶಿ ಕರೆನ್ಸಿ, ಎಟಿಎಂ ಕಾರ್ಡ್ ,ಆಧಾರ್ ಕಾರ್ಡ್, ಎಮಿರೆಟ್ಸ್ ಐಡಿ, ಪತ್ನಿಯ ದುಬೈ ಇಸ್ಲಾಮಿಕ್ ಬ್ಯಾಂಕ್ ನ ಎಟಿಎಂ ಕಾರ್ಡ್ , ಪಾಸ್ ಪೋರ್ಟ್ ಇತ್ತು ಎಂದು ಉರ್ವ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಚೇತನ್ ಕುಮಾರ್ ದಂಪತಿ ದುಬೈನಲ್ಲಿದ್ದು ಇತ್ತೀಚೆಗೆ ಊರಿಗೆ ಬಂದಿದ್ದು ಮಾ.12 ರ ಇಂದು ದುಬೈಗೆ ಹೋಗುವವರಿದ್ದರು. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಎರಡನೇ ಪ್ರಕರಣ ಇದೇ ದಿನ ನಗರದ ಹಂಪನ್ ಕಟ್ಟೆ ಸಮೀಪದ ಶರವು ಟೆಂಪಲ್ ಸಮೀಪ ನಡೆದಿದೆ.

ಮಾ.11, ಗುರುವಾರ ಮಧ್ಯಾಹ್ನ 11ರ ಸುಮಾರಿಗೆ ವ್ಯಕ್ತಿಯೊಬ್ಬರು ನಗರದ ಶರವು ದೇವಸ್ಥಾನದ ಮುಂಭಾಗ ಕಾರು ನಿಲ್ಲಿಸಿ ಅಲ್ಲೆ ಎದುರಿನ ಐಡಿಲ್ ಕಫೆಯಲ್ಲಿ ಕಾಫಿಕುಡಿದು ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಅದರೊಳಗಿದ್ದ ಬ್ಯಾಗನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಬ್ಯಾಗಿನಲ್ಲಿ ಸ್ವಲ್ಪ ನಗದು ಹಾಗು ಕೆಲವು ಪ್ರಮುಖ ದಾಖಲೆ ಪತ್ರಗಳು ಮತ್ತು ಚೆಕ್ ಪುಸ್ತಕ ಇತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ತಮಿಳುನಾಡು ತಂಡದ ಕೃತ್ಯ ಶಂಕೆ?

ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಕಳ್ಳರ ತಂಡವೊಂದು ನಗರಕ್ಕೆ ಆಗಮಿಸಿದ್ದು, ಇದು ಇದೇ ತಂಡದ ಕೃತ್ಯವಾಗಿರ ಬೇಕು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.