ಕರ್ನಾಟಕ

ಸರ್ಕಾರ 1-5ನೇ ತರಗತಿ ಆರಂಭಕ್ಕೆ ಅನುಮತಿ ನೀಡಿಲ್ಲ, ಆದೇಶ ಉಲ್ಲಂಘಿಸಿ ತರಗತಿ ಆರಂಭಿಸಿರುವವರ ವಿರುದ್ಧ ಸೂಕ್ತ ಕ್ರಮ

Pinterest LinkedIn Tumblr

ಬೆಂಗಳೂರು: ಸರ್ಕಾರ 1-5ನೇ ತರಗತಿ ಆರಂಭಕ್ಕೆ ಅನುಮತಿ ನೀಡಿಲ್ಲ. ಸರ್ಕಾರದ ನಿರ್ಧಾರದ ಹಿಂದೆ ಮಕ್ಕಳ ಹಿತ, ಯೋಗಕ್ಷೇಮದ ಕುರಿತು ಚಿಂತನೆ ಇರುತ್ತದೆ. ಆದೇಶ ಉಲ್ಲಂಘಿಸಿ ತರಗತಿ ಆರಂಭಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅವರು, ಆರೋಗ್ಯ ಸಚಿವರು ನನ್ನೊಡನೆ ಮಾತನಾಡಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದರ ಹಿಂದೆ ಮಕ್ಕಳ ಹಿತ, ಯೋಗಕ್ಷೇಮಗಳ ಕುರಿತು ಚಿಂತನೆ ಇರುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಆರನೇ ತರಗತಿಯಿಂದ 12ನೇ ತರಗತಿಯವರೆಗೆ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಒಂದರಿಂದ 5ರ ವರೆಗೂ ತರಗತಿಗಳನ್ನು ಪ್ರಾರಂಭಿಸಲು ಆರೋಗ್ಯ ಇಲಾಖೆ ಸಮ್ಮತಿ ನೀಡಿಲ್ಲ. ಶಿಕ್ಷಣ ಇಲಾಖೆ ಸಹ ಇದನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಕೆಲ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಮೀರಿ ಒಂದರಿಂದ ಐದರ ವರೆಗಿನ ತರಗತಿಗಳನ್ನು ನಡೆಸುತ್ತಿರುವ ಮಾಹಿತಿ ದೊರಕಿದೆ. ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಯಾರೂ ಸಹ ಮಕ್ಕಳ ಯೋಗಕ್ಷೇಮಕ್ಕಾಗಿ ದೀರ್ಘ ಚಿಂತನೆ ನಡೆಸಿ ಕೈಗೊಂಡಿರುವ ಸರ್ಕಾರದ ನಿರ್ಧಾರ, ಆದೇಶಗಳನ್ನು ಮೀರಿ ತಾವೇ ಸ್ವತಃ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.