ಕರಾವಳಿ

ಕಾಣಿಕೆ ಡಬ್ಬಿ ಸೇರಿದಂತೆ‌ ಹಲವು ಕಳ್ಳತನ ಪ್ರಕರಣದ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Pinterest LinkedIn Tumblr

ಮಂಗಳೂರು : ದೇವಸ್ಥಾನದ ಕಾಣಿಕೆ ಡಬ್ಬಿ ಕಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ‌ ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಆರೋಪಿಯನ್ನು ಸ್ಥಳೀಯರು ಹಿಡಿದು ಕೊಣಾಜೆ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಮೊಂಟೆಪದವಿನ ತಾರಾನಾಥ ಯಾನೆ ಮೋಹನ ಬಂಧಿತ ಆರೋಪಿ. ಈತ ಹಲವು ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ, ತನ್ನ ಮಿತ್ರರ ವಾಹನಗಳಿಂದಲೇ ಪೆಟ್ರೋಲ್ ಕಳವು ಮಾತ್ರವಲ್ಲದೆ ಸ್ಥಳೀಯ ದೇವಸ್ಥಾನವೊಂದರ ಕಾಣಿಕೆ ಡಬ್ಬಿಯ ಹಣವನ್ನೂ ಕಳವು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈತ ಮೊದಲು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಬಳಿಕ ಈತನನ್ನು ಸಂಘಟನೆಯಿಂದ ದೂರವಿಡಲಾಗಿದೆ ಎಂದು ತಿಳಿದುಬಂದಿದ್ದು, ಆ ಬಳಿಕ ಸುಮಾರು ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಾರಾನಾಥ ತನ್ನ‌ ಕೃತ್ಯ ಮತ್ತೆ ಮುಂದುವರಿಸಿದ್ದು, ಶನಿವಾರ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ.

ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿದ್ದ ಸ್ಕೂಟರ್ ಕಳವು ಮಾಡಿ ಪರಾರಿಯಾಗಿದ್ದು, ಮನೆಮಂದಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಹಲವು ಮಂದಿಯ ಜೊತೆ ಚರ್ಚಿಸಿದಾಗ ಆರೋಪಿ ತಾರಾನಾಥ ಎಂಬುದನ್ನು ಖಚಿತಪಡಿಸಿಕೊಂಡು‌ ರವಿವಾರ ರಾತ್ರಿ ಆತನ ಮನೆಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ್ದ ಸಾರ್ವಜನಿಕರು ತಾರಾನಾಥನನ್ನು ಹಿಡಿದು ಕೊಣಾಜೆ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Comments are closed.