ಬೆಂಗಳೂರು: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಗುರುವಾರದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಪ್ರಸ್ತಾಪಿಸಿದ್ದು ಇದಕ್ಕೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದ ಶಾಸಕರ ವರ್ತನೆಗೆ ಕೆರಳಿದ ಸ್ಪೀಕರ್ ಸದನದಿಂದ ಅವರನ್ನು 1 ವಾರ ಅಮಾನತು ಮಾಡಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣ ಮುಗಿಸುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಗೆ ಹಿಂತಿರುಗಬೇಕೆಂದು ಸ್ಪೀಕರ್ ಮನವಿ ಮಾಡಿದರು.
ಆದರೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಶರ್ಟ್ ಬಿಚ್ಚಿದ್ದನ್ನು ಕಂಡು ಸಿಡಿಮಿಡಿಗೊಂಡ ಸ್ಪೀಕರ್ ಕಳೆದ 50 ವರ್ಷಗಳಿಂದ ದೇಶವನ್ನು ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷದ ಸದಸ್ಯರು ವರ್ತಿಸುವ ರೀತಿ ಇದೇನಾ ? ನಿಮ್ಮ ಅಭಿಪ್ರಾಯಗಳು ಏನೇ ಇರಲಿ ಮೊದಲು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿ ಎಂದು ಸೂಚಿಸಿದರು.
‘ಈ ವಿಚಾರವಾಗಿ ಇಂತವರೇ ಚರ್ಚೆ ನಡೆಸುತ್ತಾರೆ ಎಂದು ಹೆಸರುಗಳನ್ನೂ ಕೊಟ್ಟಿದ್ದೀರಿ ’ ಆದರೆ ಸದನ ಆರಂಭವಾದ ಬಳಿಕ ನಿಮ್ಮ ನಿರ್ಧಾರ ಬದಲಾದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು. ಈ ವೇಳೆ ಶಾಸಕ ಸಂಗಮೇಶ್ ಅವರು ಧರಿಸಿದ್ದ ಅಂಗಿಯನ್ನು ಕಳಚಿ ತೋಳನ್ನು ಮೇಲೆತ್ತಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಬಿಸಿದರು.
ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಸ್ಪೀಕರ್ ಕಾಗೇರಿ ಅವರು, ರಾಷ್ಟ್ರೀಯ ಪಕ್ಷದ ಒಬ್ಬ ಹಿರಿಯ ಸದಸ್ಯರಾಗಿ ಇದೆಯಾ ನಿಮ್ಮ ನಡವಳಿಕೆ, ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸದನ ಗೌರವವನ್ನು ಕಾಪಾಡಿ, ಗೌರವದಿಂದ ನಡೆದುಕೊಳ್ಳಿ, ಇದು ಒಳ್ಳೆಯದಲ್ಲ,ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದರು.
ಆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರು ಬಂದು ಸಂಗಮೇಶ್ ಅವರಿಗೆ ಶರ್ಟ್ ಹಾಕಿಸಿದರು. ಸದಸ್ಯರ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ಸಭಾಧ್ಯಕ್ಷರು 15 ನಿಮಿಷಗಳ ಕಾಲ ಮುಂದೂಡಿದರು.
ಆ ಬಳಿಕ ಸದನದಿಂದ ಅಮಾನತುಗೊಳಿಸುವಂತ ನಿರ್ಧಾರವನ್ನು ಕೈಗೊಂಡರು. ಈ ನಿರ್ಧಾರಕ್ಕೆ ಆಡಳಿತ ಪಕ್ಷ ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಒಂದು ವಾರಗಳ ಕಾಲ ಅಮಾನತುಗೊಳಿಸಿದ್ದಾರೆ.