ಕರಾವಳಿ

ರಾಡಿನಿಂದ ಯುವಕನ ತಲೆ ಒಡೆದು ಪರಾರಿಯಾಗಿದ್ದ ಕೊಲೆಯತ್ನ ಕೇಸಿನ ಆರೋಪಿಯನ್ನು ಬಂಧಿಸಿದ ಕೋಟ ಪೊಲೀಸರು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯಲ್ಲಿ ತನ್ನದೆ ಗ್ರಾಮದ ಯುವಕನೊಬ್ಬನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಪಾರಂಪಳ್ಳಿ ಪಡುಕೆರೆ ನಿವಾಸಿ ಶಂಭು ಪೂಜಾರಿ ಎನ್ನುವಾತನ ಮಗ ಗಗನ್ ಪೂಜಾರಿ (25) ಬಂಧಿತ ಆರೋಪಿ. ಕೋಟ ಪೊಲೀಸರ ತಂಡ ತಲ್ಲೂರಿನಲ್ಲಿ ಆರೋಪಿಯನ್ನು ಬಂಧಿಸಿದೆ. ಈತನ ಮೇಲೆ ಕೊಲೆ ಯತ್ನ ಪ್ರಕರಣ (ಐಪಿಸಿ ಕಲಂ 307) ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶಿಸಿದೆ. ಈತ ಪಾರಂಪಳ್ಳಿಯ ಅಕ್ಷಯ್ ಮೊಗವೀರ (23) ಎಂಬಾತನಿಗೆ ಕಬ್ಬಿಣದ ರಾಡಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಸದ್ಯ ಅಕ್ಷಯ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಹಿನ್ನೆಲೆ….
ಫೆ.23 ರಾತ್ರಿ ಊಟ ಮುಗಿಸಿ ಸ್ನೇಹಿತ ಚೇತನ್ ಜೊತೆ ತೆರಳುತ್ತಿದ್ದಾಗ ಮೊದಲೇ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ತನ್ನ ಮನೆ ಎದುರು ಅಡ್ಡಗಟ್ಟಿದ ಗಗನ್ ಏಕಾಏಕಿ ಅಕ್ಷಯ್ ಮೇಲೆ ಹಲ್ಲೆ ನಡೆಸಿ, ಅವ್ಯಾಚವಾಗಿ ನಿಂದಿಸಿದ್ದ. ಅಷ್ಟೆ ಅಲ್ಲದೆ ಹಿಂದಿನಿಂದ ಅಕ್ಷಯ್ ತಲೆ ಹಿಂಭಾಗಕ್ಕೆ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಅಕ್ಷಯನನ್ನು ಮೊದಲಿಗೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು‌.

ಮೊದಲಿಗೆ ಆರೋಪಿ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಮತ್ತೋರ್ವ ವ್ಯಕ್ತಿಗೆ ತೀವೃ ತರವಾದ ಹಲ್ಲೆ ನಡೆಸುವ ಪ್ರಕರಣದಡಿ (ಐಪಿಸಿ ಕಲಂ 326) ಸಹಿತ ಇನ್ನು ಮೂರು ಪ್ರಕರಣ ದಾಖಲಾಗಿತ್ತು.‌ ಜೀವನ್ಮರಣ ಸ್ಥಿತಿಯಲ್ಲಿರುವ ಅಕ್ಷಯ್ ವೈದ್ಯಕೀಯ ವರದಿಯ ಹಿನ್ನೆಲೆ ಆರೋಪಿ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಇದನ್ನೂ‌ ಓದಿರಿ:

ರಾಡ್‌ನಿಂದ ತಲೆಗೆ ಹೊಡೆದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಗಾಗಿ ಶೋಧ | ಪಾರಂಪಳ್ಳಿಯಲ್ಲಿ ಘಟನೆ

ತನ್ನ ಮನೆಯೆದುರೆ ಯುವಕನೊಬ್ಬನ ತಲೆ ಒಡೆದವನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

Comments are closed.