ಮಂಗಳೂರು : ಆರೋಪಿಗಳ ಐಷಾರಾಮಿ ಕಾರನ್ನು ಪೊಲೀಸರೇ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಕನ್ಸ್‌ಸ್ಟ್ರಕ್ಷನ್ ಆಯಂಡ್ ಬಿಲ್ಡರ್ ಪ್ರೈ.ಲಿ. ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲೂ, ಪೋರ್ಷ್ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಪ್ರಾಥಮಿಕ ಹಂತದ ತನಿಖೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರು ನಡೆಸಿದ್ದು, ಅದರ ವರದಿಯಲ್ಲಿ ಕಮಿಷನರ್‌ಗೆ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪರಾಧ ಪತ್ತೆದಳ ಹಿಂದಿನ ಎಸ್‌ಐ ಕಬ್ಬಳ್‌ರಾಜ್, ಸಿಸಿಬಿಯ ಆಶಿತ್, ರಾಜ ಹಾಗೂ ನಾರ್ಕೊಟಿಕ್ ಆಯಂಡ್ ಎಕನಾಮಿಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಅವರ ಹೆಸರು ಹಾಗೂ ಬ್ರೋಕರ್ ದಿವ್ಯದರ್ಶನ್ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಈ ತನಿಖೆಯನ್ನು ಸಿಐಡಿ ಎಸ್‌ಪಿ ರೋಹಿಣಿ ಕಟ್ಟೋಚ್ ಅವರ ನೇತೃತ್ವದ ತಂಡ ಪ್ರಾರಂಭಿಸಿದ್ದು, ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಿದ್ದು, ವರದಿ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಹಿಂದೆ ಸಿಸಿಬಿಯಲ್ಲಿದ್ದ ಪಿಎಸ್‌ಐ ಕಬ್ಬಾಳ್ ರಾಜ್ ಹಾಗೂ ನಾರ್ಕೊಟಿಕ್ಸ್ ಆಯಂಡ್ ಎಕನಾಮಿಕ್ಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು.
ಮಂಗಳೂರಿನಲ್ಲಿರುವ ಇನ್‌ಸ್ಪೆಕ್ಟರ್ ರಾಮಕೃಷ್ಣ ಹಾಗೂ ಚಿಕ್ಕಮಗಳೂರಿನಲ್ಲಿರುವ ಪಿಎಸ್‌ಐ ಕಬ್ಬಾಳ್ ರಾಜ್ ಅವರನ್ನು ಸಿಐಡಿ ತಂಡ ವಶಕ್ಕೆ ಪಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.