ಕರಾವಳಿ

ಜಿಎಸ್ ಬಿ ಸಮಾಜದ ಜಿಪಿಎಲ್ ಉತ್ಸವದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ : ಮಂಗಳೂರಿನಲ್ಲಿ ಸಚಿವ ಸಿಪಿ ಯೋಗೀಶ್ವರ್

Pinterest LinkedIn Tumblr

ಮಂಗಳೂರು: ಸುಶಿಕ್ಷಿತ ಸಮಾಜವಾಗಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಬದ್ಧತೆ, ಪ್ರಾಮಾಣಿಕತೆ ಯಿಂದ ರಾಷ್ಟ್ರಮಟ್ಟದಲ್ಲಿಯೇ ಹಲವು ರಂಗಗಳಲ್ಲಿ ತಮ್ಮದೇ ಛಾಪನ್ನು ಒತ್ತಿ ಮಾದರಿಯಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರ, ಜೀವಶಾಸ್ತ್ರ ಸಚಿವರಾದ ಸಿಪಿ ಯೋಗೀಶ್ವರ್ ಅವರು ಹೇಳಿದರು.

ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಬಹು ನಿರೀಕ್ಷಿತ, ಮಹಾ ಸಮ್ಮೀಲನ ಎಂದೇ ಖ್ಯಾತ ವಾಗಿರುವ ಕೊಡಿಯಾಲ್ ಸ್ಫೋರ್ಟ್ ಎಸೋಸಿಯೇಶನ್ ಪ್ರಸ್ತುತಪಡಿಸುವ ಐದನೇ ವರ್ಷದ ಫುಜ್ಲಾನಾ ಜಿಪಿಎಲ್ 2021 ಕಾರ್ಯಕ್ರಮಕ್ಕೆ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಮಂಗಳೂರಿಗೆ ಸರಕಾರಿ ಕಾರ್ಯಕ್ರಮಕ್ಕೆ ಆಗಮಿಸಿದಾಗ ಶಾಸಕ ವೇದವ್ಯಾಸ ಕಾಮತ್ ಅವರ ಪ್ರೀತಿಯ ಕರೆಗೆ ಓಗೊಟ್ಟು ಬಂದಿದ್ದರೂ ಹಬ್ಬದ ವಾತಾವರಣದಲ್ಲಿ ಈ ಅದ್ದೂರಿ ಉತ್ಸವವನ್ನು ಕಣ್ಣಾರೆ ಕಂಡು ಸಣ್ಣ ಸಮುದಾಯವಾದರೂ ದೇಶದ ಆರ್ಥಿಕತೆ, ಸಂಸ್ಕೃತಿ, ಬ್ಯಾಂಕಿಂಗ್, ಶಿಕ್ಷಣ ಸಹಿತ ಹಿಂದೂತ್ವವನ್ನು ಸೇರಿಸಿಕೊಂಡು ಎಲ್ಲಾ ಕಡೆ ವಿಶಿಷ್ಟ ಕೊಡುಗೆ ಕೊಟ್ಟಿರುವ ಜಿಎಸ್ ಬಿ ಸಮುದಾಯದವರನ್ನು ಕಂಡು ಖುಷಿಯಾಗುತ್ತದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶ ಇದ್ದು ರಾಜ್ಯ, ಕೇಂದ್ರ ಸರಕಾರದ ಸಹಕಾರದಲ್ಲಿ ಅಭಿವೃದ್ಧಿ ಮಾಡುವ ಯೋಚನೆ ಇದೆ ಎಂದು ಸಚಿವರು ಹೇಳಿದರು.

ಸಂಜೆ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಬಳಿಕ ಸಾಂಕೇತಿಕವಾಗಿ ಬ್ಯಾಟಿಂಗ್ ಮೂಲಕ ಸಚಿವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್, ಜಿಯೋಮಾರ್ಟ್.ಕಾಮ್ ನ ಗೌರವ್, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಮಂಜುನಾಥ ಭಂಡಾರಿ, ಹಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ, ಆಭರಣ್ ಜ್ಯುವೆಲ್ಲರ್ಸ್ ನ ಅಕ್ಷರ್ ಕಾಮತ್, ಡಿಆರ್ ಎಸ್ ಇನ್ ಫ್ರಾಟೆಕ್ ನ ರಾಘವೇಂದ್ರ ಕುಡ್ವ, ದೇವಗಿರಿ ಟೀ ನಂದಗೋಪಾಲ್ ಶೆಣೈ, ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್, ಖ್ಯಾತ ಲೆಕ್ಕಪರಿಶೋಧಕರುಗಳಾದ ಎಸ್ ಎಸ್ ನಾಯಕ್, ಜಗನ್ನಾಥ್ ಕಾಮತ್, ಉದ್ಯಮಿಗಳಾದ ನಿತ್ಯಾನಂದ ಪೈ ಕಾರ್ಕಳ, ನರೇಂದ್ರ ನಾಯಕ್, ವಾಸುದೇವ ಕಾಮತ್, ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಪ್ರಶಾಂತ್ ರಾವ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಹನುಮಂತ ಕಾಮತ್, ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ, ವಿವೇಕ್ ಟ್ರೇಡರ್ಸ್ ಮಾಲೀಕ ಮಂಗಲ್ಪಾಡಿ ನರೇಶ್ ಶೆಣೈ, ಯುವ ಉದ್ಯಮಿಗಳಾದ ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ತೆಂಗಿನ ಕಾಯಿ ಒಡೆದು ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ:

ಶುಕ್ರವಾರ ಮಧ್ಯಾಹ್ನ ಸಾಂಪ್ರದಾಯಿಕವಾಗಿ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಆ ಬಳಿಕ ವಿವಿಧ ಆಹಾರ, ಪಾನೀಯಗಳ ವಿಶಾಲವಾದ ಅರುಣಾ ಮಸಾಲ ಫುಡ್ ಕೋರ್ಟ್ ಅನ್ನು ಅರುಣಾ ಮಸಾಲದ ಕಂಪೆನಿಯ ಮಾಲೀಕರಾದ ಶ್ರೀ ಅನಂತೇಶ್ ಪ್ರಭು ಅವರು ಉದ್ಘಾಟಿಸಿ ಮೂರು ದಿನಗಳ ತನಕ ನಿರಂತರವಾಗಿ ವೈವಿದ್ಯಮಯ ಆಹಾರ, ಪಾನೀಯಗಳನ್ನು ಅತಿಥಿಗಳಿಗೆ ಉಣಬಡಿಸುವ ಆತಿಥ್ಯಕ್ಕೆ ಶುಭ ಹಾರೈಸಿದರು.

ಶುಕ್ರವಾರ ಬೋಟ್ ರೈಡಿಂಗ್ ಕೂಡ ವಿಶೇಷ ಆಕರ್ಷಣೆಯಾಗಿದ್ದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ರಿಜಿಸ್ಟ್ರಾರ್ ಗುರುದತ್ ಭಾಗ್ವತ್ ಅವರು ಉದ್ಘಾಟಿಸಿದರು. ಮಕ್ಕಳಿಗೆ ವಿಶೇಷವಾದ ವೇದಿಕೆಯನ್ನು ಒದಗಿಸಿ ಅವರ ಪ್ರತಿಭೆಯನ್ನು ಬೆಳಕಿಗೆ ತರುವ ಸ್ಪರ್ಧೇ ಹಾಗೂ ಪ್ರತಿಭಾ ಪ್ರದರ್ಶನವನ್ನು ಚಂದ್ರಕಾಂತ್ ಕಾಮತ್ ಉದ್ಘಾಟಿಸಿದರು.

ಶುಕ್ರವಾರದಿಂದ ಮೂರು ದಿನಗಳ ತನಕ ಅರ್ಹನಿಶಿಯಾಗಿ ನಡೆಯುವ ಕ್ರಿಕೆಟ್ ಪಂದ್ಯಾಟಗಳನ್ನು ಸಹ್ಯಾದ್ರಿ ಹಚ್ಚಹಸುರಿನ ಕ್ರೀಡಾಂಗಣದಲ್ಲಿ ನೇತ್ರಾವತಿ ನದಿಯ ತಡದಲ್ಲಿ ನಡೆಯುತ್ತಿದ್ದು ಅಂದಾಜು 25000 ಜನ ಭಾಗವಹಿಸುವ ನಿರೀಕ್ಷೆ ಇದೆ.

ಮಂಗಳೂರಿನಲ್ಲಿಯೇ ಪ್ರಪ್ರಥಮ ಬಾರಿಗೆ ಪಂಜಿ ಜಂಪಿಂಗ್ ಕೂಡ ಈ ಬಾರಿಯ ಆಕರ್ಷಣೆಯಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಯೂತ್ ಆಫ್ ಜಿಎಸ್ ಬಿ ಪ್ರಮುಖ ಮಾಧ್ಯಮ ಪಾಲುದಾರಿಕೆ ವಹಿಸಿಕೊಂಡಿದೆ. ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಒಳಗೊಂಡು ಮಹಾರಾಷ್ಟ್ರ, ಕೇರಳ, ಹೈದ್ರಾಬಾದಿನ ಒಟ್ಟು 12 ತಂಡಗಳು ಪ್ರತಿಷ್ಟಿತ ಫುಜ್ಲಾನ್ ಜಿಪಿಎಲ್ 2021 ಟ್ರೋಫಿಗಾಗಿ ಸೆಣಸಾಡುತ್ತಿವೆ.

Comments are closed.