ಕರಾವಳಿ

ಜಿಲ್ಲಾಧಿಕಾರಿಗಳಿಂದ ಜಾದೂ ಪ್ರದರ್ಶನ -ರಂಜಿಸುವ, ಮನಸ್ಸಿಗೆ ಮುದ ನೀಡುವ ಜಾದೂ ಕಲೆ ಉಳಿಸಿ ಬೆಳೆಸುವ ಕೆಲಸ ಆಗಬೇಕು: ಡಿಸಿ

Pinterest LinkedIn Tumblr

ಮಂಗಳೂರು : ಭಾರತದ ಪ್ರಾಚೀನ ಕಲೆಗಳಲ್ಲಿ ಒಂದಾಗಿರುವ ಜಾದೂ ಕಲೆಯನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ನ್ನನದ ದುರ್ಬಳಕೆಯಿಂದ ಸವಾಲುಗಳನ್ನು ಎದುರಿಸುತ್ತಿದೆ. ಕುಟುಂಬದ ಎಲ್ಲರನ್ನೂ ರಂಜಿಸುವ ಮನಸ್ಸಿಗೆ ಮುದ ನೀಡುವ ಜಾದೂ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಕರೆ ನೀಡಿದರು.

ಜಗತ್ ಪ್ರಸಿದ್ದ ಜಾದೂಗಾರ ಪಿ.ಸಿ.ಸರ್ಕಾರ್ ಅವರ ಜನ್ಮದಿನದ ಪ್ರಯುಕ್ತ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಜಾದೂ ದಿನಾಚರಣೆಯನ್ನು ಜಾದೂ ತಂತ್ರಗಾರಿಕೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮಾನಂದಜಿ ಮಹಾರಾಜ್ ಇವರು ಮಾತನಾಡಿ, ಜಾದೂ ಕಲೆಯ ತವರೂರು ಭಾರತ, ಭಾರತದಲ್ಲಿ ಜಾದೂವನ್ನು ಉತ್ತುಂಗ ಸ್ಥಾನಕ್ಕೆ ಏರಿಸಿದ ಮಹಾನ್ ಕಾರ್ಯ ಮಾಡಿದ ಪದ್ಮಶೀ ಪ್ರಶಸ್ತಿ ವಿಜೇತ ಪಿ ಸಿ ಸರ್ಕಾರ್ ಅವರ ಕೊಡುಗೆಯನ್ನು ನೆನೆಪಿಸುವ ಮಹತ್ ಕಾರ್ಯ ವಿಸ್ಮಯ ಜಾದೂ ಪ್ರತಿಷ್ಠಾನದ ಮೂಲಕ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಇವರು ಮಾತಾನಾಡಿ, ರಾಮಕ್ರಷ್ಣ ಮಠದ ಸ್ವಚ್ಛತಾ ಆಂದೋಲನದ ಜಾಗ್ರತಿಯನ್ನು ಜಾದೂ ಮೂಲಕ ಪರಿಣಾಮಕಾರಿಯಾಗಿ ಮಾಡಿರುವ ಕುದ್ರೋಳಿ ಗಣೇಶ್ ಅವರ ಮಾಡಿದ್ದಾರೆ.ಅದೇ ರೀತಿ ಜಾದೂಗಾರರನ್ನು ವಿವಿಧ ಸಾಮಾಜಿಕ ಕಾರ್ಯಗಳಿಗೆ ಸರಕಾರ, ಜಿಲ್ಲಾಡಳಿತ ಬಳಸಿಕೊಳ್ಳಲಿ ಎಂದು ಮನವಿ ಮಾಡಿದರು.

ಕನ್ನಡ ಸಂಸ್ಕ್ರತಿ ಇಲಾಖೆಯ ಕಲಾವಿದರ ಪಟ್ಟಿಯಲ್ಲಿ ಜಾದೂಗಾರರ ಹೆಸರು ಇಲ್ಲದಿರುವುದು ವಿಷಾದನೀಯ. ಆದರೆ ಪಟ್ಟಿಯಲ್ಲಿ ಜಾದೂ ಕಲೆ ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಯಲಿ.ಅದಕ್ಕೆ ನನ್ನ ಪೂರ್ಣ ಸಹಕಾರ ನೀಡುವೆ ಎಂದು ಕನ್ನಡ ಸಂಸ್ಕ್ರತಿ ಇಲಾಖೆ ಇದರ ಉಪ ನಿರ್ದೇಶಕರಾದ ರಾಜೇಶ್ ಜಿ ತಿಳಿಸಿದರು.

ಭಾರತದ, ಮಂಗಳೂರಿನ ಕೀರ್ತಿ ಜಗದಗಲಕ್ಕೆ ಪಸರಿಸಲಿ ಎಂದು ವಿಶೇಷ ಅತಿಥಿಯಾಗಿದ್ದ ಮಾಜಿ ಮೇಯರ್ ಹಾಗೂ ಉದ್ಯಮಿ ದಿವಾಕರ್ ಕದ್ರಿ ಶುಭ ಹಾರೈಸಿದರು.

ಹಿರಿಯ ಜಾದೂಗಾರರಾದ ಪ್ರೊಫೆಸರ್ ಮಾಧವ್ ಕಾಸರಗೋಡು ಇವರಿಗೆ ಐಂದ್ರಜಾಲಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಡಾ.ನಾ.ದಾ.ಶೆಟ್ಟಿ ಇವರು ಪ್ರಶಸ್ತಿ ವಿಜೇತರ ಸಾಧನೆಯ ಪರಿಚಯ ಹೇಳಿದರು.

ಆಶಯ ಭಾಷಣ ಮಾಡಿದ ವಿಸ್ಮಯ ಜಾದೂ ಪ್ರತಿಷ್ಠಾನದ ಸಂಚಾಲಕರಾದ ಕುದ್ರೋಳಿ ಗಣೇಶ್ ಜಾದೂ ದಿನಾಚರಣೆಯ ಮಹತ್ವವನ್ನು ವಿವರಿಸಿ ಜಾದೂ ಕ್ಷೇತ್ರವನ್ನು ಬೆಳೆಸುವಲ್ಲಿ ಎಲ್ಲಾ ಜಾದೂ ಕಲಾವಿದರು ದುಡಿಯಲಿ ಮತ್ತು ಜಾದೂ ಕಲಾವಿದರ ಪರಿಶ್ರಮವನ್ನು ಗುರುತಿಸಿ ಬೆಳೆಸುವ ಕೆಲಸ ಎಲ್ಲರಿಂದ ಆಗಲಿ ಎಂದು ಬಿನ್ನವಿಸಿದರು.

ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಸಹ್ಯಾದ್ರಿ ಸಮೂಹದ ಮಂಜುನಾಥ ಭಂಡಾರಿ, ಶಿಕ್ಷಣ ಕ್ಷೇತ್ರದ ನರೇಶ್ ಶೆಣೈ ಇವರು ಜಾದೂ ಕಲಾವಿದರನ್ನು ಗೌರವಿಸಿದರು.

ಪ್ರವೀಣ್ ಉಡುಪ ಕಾರ್ಯಕ್ರಮ ನಿರೂಪಿಸಿದರು.ಜಾದೂಗಾರ ರಾಜೇಶ್ ಮಳಿ ವಂದಿಸಿದರು. ಬಳಿಕ ನಡೆದ ಜಾದೂ ಪ್ರದರ್ಶನದಲ್ಲಿ ಸತೀಶ್ ಹೆಮ್ಮಾಡಿ, ರಾಜೇಶ್ ಮಳಿ,ಅಂಜನಾ ಹಾಗೂ ಅಪೂರ್ವ ಮಳಿ ಮತ್ತು ಕುದ್ರೋಳಿ ಗಣೇಶ್ ಇವರು ಹಲವು ಅದ್ಭುತ ಜಾದೂ ತಂತ್ರಗಾರಿಯಿಂದ ಪ್ರೇಕ್ಷಕರಿಗೆ ಜಾದೂ ರಂಜನೆ ನೀಡಿದರು.

ಸಮಾರಂಭದ ವಿಶೇಷತೆಗಳು:

ವಿಶಿಷ್ಟವಾಗಿ ನಡೆದ ಉದ್ಘಾಟನೆಯಲ್ಲಿ ಜಿಲಾಧಿಕಾರಿಯವರು ತನ್ನ ಕೈಗೆ ನೀಡಲಾದ ಮಂತ್ರದಂಡವನ್ನು ವೇದಿಕೆಯ ಮೇಲಿದ್ದ ಕಪ್ಪು ದಂಡದ ಮೇಲೆ ತಿರುಗಿಸಿದಾಗ ಅದು ಇದಕ್ಕಿಂದಂತೆ ಕೊಡೆಗಳಾಗಿ ಬದಲಾಯಿತು.

ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮಾನಂದ ಮಹಾರಾಜ್ ಇವರು ಮಂತ್ರದಂಡವನ್ನು ಬೀಸಿದಾಗ ಬರಿದಾಗಿದ್ದ ಫೋಟೋ ಪ್ರೇಮ್ ನಲ್ಲಿ ಪಿ ಸಿ ಸರ್ಕಾರ್ ರವರ ಭಾವಚಿತ್ರ ಜಾದೂ ಮೂಲಕ ಅನಾವರಣಗೊಂಡಿತು.

ಬಾಲ ಜಾದೂ ಕಲಾವಿದರಾದ ಅಂಜನಾ ಮತ್ತು ಅಪೂರ್ವ ಮಳಿ ಇವರು ಜಾದೂ ಮೂಲಕ ಸ್ರಷ್ಟಿ ಮಾಡಲಾದ ಗುಲಾಬಿ ಹೂವುಗಳನ್ನು ಪುಟಾಣಿಗಳು ಅತಿಥಿಗಳಿಗೆ ನೀಡಿ ಸ್ವಾಗತಿಸಿದರು.

Comments are closed.