ಕರಾವಳಿ

15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಆರೋಪಿ ದೋಷಿಯೆಂದು ಉಡುಪಿ‌ ಪೋಕ್ಸೋ ಕೋರ್ಟ್ ತೀರ್ಪು

Pinterest LinkedIn Tumblr

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕಿ‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ, ಬೆದರಿಕೆ ಹಾಕಿದ್ದ ಆರೋಪಿ ಕೇಶವ್ ಎನ್ನುವಾತನ ಮೇಲಿನ ಎಲ್ಲಾ ದೋಷಾರೋಪಣೆಗಳು ರುಜುವಾತಾದ ಹಿನ್ನೆಲೆ ಆತ ಅಪರಾಧಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ವ್ಯಾಪ್ತಿಯಲ್ಲಿ 2016ರಲ್ಲಿ ಈ ಘಟನೆ ನಡೆದಿತ್ತು. 15 ವರ್ಷ ಪ್ರಾಯದ ಬಾಲಕಿ‌ ಅನಾರೋಗ್ಯದ ಹಿನ್ನೆಲೆ ಮನೆಯಲ್ಲಿಯೇ ಇದ್ದು ಪಕ್ಕದ ಮನೆಯ ಸಂಬಂಧಿಯೂ ಆಗಿರುವ ಕೇಶವ (32) ಆಕೆ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡು ಆಕೆಯ ಚೂಡಿದಾರ್ ಶಾಲಿನಿಂದ ಕೈಕಾಲು ಕಟ್ಟಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದು ಆಕೆ ಕೂಗಿಕೊಂಡಾಗ ಮನೆ ಸಮೀಪದಲ್ಲಿದ್ದ ಆಕೆ ಮಾವ ಬಂದಿದ್ದರಿಂದ ಆರೋಪಿ ಬಾಲಕಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಘಟನೆ ತಿಳಿದ ಬಾಲಕಿಯ ಸೋದರ ಆರೋಪಿ ಮನೆಗೆ ವಿಚಾರಣೆಗೆ ಹೋದಾಗಲೂ ಆತನಿಗೆ ಆ ಮನೆಯ ಇಬ್ಬರು ಬೆದರಿಕೆ ಹಾಕಿ‌ ಕಳಿಸಿದ್ದರು. ಬಳಿಕ ಸಂತ್ರಸ್ತ ಬಾಲಕಿ ಅಂದು ಕುಂದಾಪುರದಲ್ಲಿದ್ದ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಅಂದಿನ ಮಹಿಳಾ ಠಾಣೆ ಉಪನಿರೀಕ್ಷಕಿ ಸುಜಾತಾ ಸಾಲ್ಯಾನ್ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 11 ಮಂದಿ ಸಾಕ್ಷಿಗಳ ಪೈಕಿ ಸಂತ್ರಸ್ತೆ ಹಾಗೂ ಆತನ ಸಹೋದರನ ಸಾಕ್ಷ್ಯವು ಪ್ರಕರಣದಲ್ಲಿ ಅಭಿಯೋಜನೆಗೆ ಪೂರಕವಾಗಿತ್ತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಕೇಶವ್ ದೋಷಿಯೆಂದು ತೀರ್ಮಾನಿಸಿ ತೀರ್ಪು ನೀಡಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.