ಮನೋರಂಜನೆ

ದರ್ಶನ್‌ ಫ್ಯಾನ್ಸ್‌ ವರ್ತನೆ ಬಳಿಕ ಸಿಟ್ಟಾಗಿರುವ ನಟ ಜಗ್ಗೇಶ್ ಹೇಳಿದ್ದೇನು…?

Pinterest LinkedIn Tumblr

‘ನವರಸ ನಾಯಕ’ ಜಗ್ಗೇಶ್‌ ಮತ್ತು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿಮಾನಿಗಳ ನಡುವೆ ನಡೆದ ಮಾತಿನ ಚಕಮಕಿಯಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ವಿವಾದ ಶುರು ಆಗಿದೆ. ಒಟ್ಟಾರೆ ಘಟನೆಯ ಕುರಿತು ಜಗ್ಗೇಶ್‌ ಅವರು ತಮ್ಮ ಟ್ವಿಟರ್‌ ಖಾತೆ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಕೆಲವರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿ ಕಂಡು ಜಗ್ಗೇಶ್‌ ಗರಂ ಆಗಿದ್ದಾರೆ. ಇದೇ ವೇಳೆ ಅವರು ಚಂದನವನದ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.

‘ಸಿನಿಮಾ ರಂಗದಲ್ಲಿ ನಾನು 40 ವರ್ಷ ಕೆಲಸ ಮಾಡಿದ್ದೇನೆ. ನಾನು ಏನು ಎಂಬುದು ಮಾಧ್ಯಮದವರಿಗೆ ಗೊತ್ತಿದೆ. ಆದರೆ ಇಂದು ಜಗ್ಗೇಶ್‌ ಬಟಾಬಯಲಾದ ಎಂದು ಬರೆಯಲಾಗಿದೆ. ನನ್ನ ಜೊತೆ ಮಾತನಾಡಲು ಹುಡುಗರ ಬಂದಾಗ ನಾನೇನೂ ಓಡಿಹೋಗಿಲ್ಲ. ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್‌ಗೆ ಅಪಮಾನ ಮಾಡಿಬಿಟ್ವಿ ಅಂತ ನಿಮಗೆ ಅನಿಸಿದರೆ ಅದರಿಂದ ನನಗೆ ಯಾವುದೇ ನೋವು, ನಷ್ಟ ಇಲ್ಲ’ ಎಂದು ಜಗ್ಗೇಶ್‌ ಹೇಳಿದ್ದಾರೆ.

‘ಖಾಸಗಿ ಆಗಿ ನಾನು ಮಾತನಾಡಿದ್ದನ್ನು ಸಾರ್ವಜನಿಕವಾಗಿಸುವ ಕುತಂತ್ರ ಇದೆ ಎಂದ ಮಾತ್ರಕ್ಕೆ ನಾನು ಹೆದರಿಕೊಂಡು ಮನೆಯಲ್ಲಿ ಕೂತುಕೊಳ್ಳುತ್ತೇನೆ ಎಂಬ ಭಾವನೆ ಬೇಡ. ನಾನು ತಪ್ಪು ಮಾಡಿಲ್ಲ. ಯಾಕೆ ಹೆದರಿಕೊಳ್ಳಲಿ?’ ಎಂದಿರುವ ಜಗ್ಗೇಶ್‌ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ…

‘ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಈ ಯಾವನೂ ಹುಟ್ಟಿರಲಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ಯಾರಿಗೆ ಜಾಲರ ಹಿಡಿಯುತ್ತಿದ್ದೀರೋ, ಯಾರಿಗೆ ಬಕೆಟ್‌ ಹಿಡಿಯುತ್ತಿದ್ದೀರೋ ಅವರು ಯಾರೂ ಹುಟ್ಟಿರಲಿಲ್ಲ. 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಪ್ರಭಾಕರ್‌, ಅನಂತ್‌ನಾಗ್‌ ಅವರ ಜೊತೆ ಹೆಜ್ಜೆ ಹಾಕಿದವನು ನಾನು. ಅಂಥವರ ಜೊತೆ ಬದುಕಿದವನು ನಾನು. ಇವತ್ತು ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ನಿಮ್ಮ ಯಾರಿಂದಲೂ ಅಲ್ಲ. ಕನ್ನಡಿಗರಿಂದ, ಕನ್ನಡಿಗರ ಪ್ರೀತಿಯಿಂದ. ಇವತ್ತು ನಾನು ನನ್ನ ಎಡಗಾಲನ್ನೂ ಬೇರೆ ಭಾಷೆಗೆ ಇಟ್ಟಿಲ್ಲ’ ಎಂದಿದ್ದಾರೆ ಜಗ್ಗೇಶ್‌.

‘ಕನ್ನಡ ಕನ್ನಡ ಕನ್ನಡ ಎಂದು ಸತ್ತಿದ್ದೇನೆ. ಮುಂದೆಯೂ ಸಾಯುತ್ತೇನೆ. ನನಗೆ ಬಂದು ನೀವು ಅವಮಾನ ಮಾಡುತ್ತೀರಾ? ಜಗ್ಗೇಶ್‌ ಕಾಗೆ ಹಾರಿಸುತ್ತಾನೆ ಎನ್ನುತ್ತೀರಾ? ನನ್ನ ಬದುಕಿನಲ್ಲಿ ನಾನು ಕಾಗೆ ಹಾರಿಸುವುದಾಗಿದ್ದರೆ 20 ಸಾರಿ ಎಂಎಲ್‌ಎ ಆಗುತ್ತಿದ್ದೆ. 20 ಬಾರಿ ಮಂತ್ರಿ ಆಗುತ್ತಿದ್ದೆ. ಬಕೆಟ್‌ ಹಿಡಿದು ಬೂಟ್‌ ನೆಕ್ಕಿದ್ದರೆ ನೂರಾರು ಪೋಸ್ಟ್‌ಗಳನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಇವತ್ತು ನಾನು ಸ್ವಾಭಿಮಾನಿಯಾಗಿ ಬದುಕುತ್ತಿರುವುದು ನಿಮ್ಮಿಂದ ಈ ಮಾತುಗಳನ್ನು ಕೇಳಿಸಿಕೊಳ್ಳೋಕೆ ಅಲ್ಲ. ನನ್ನನ್ನು ಘೇರಾವ್‌ ಮಾಡಿದ್ರಾ ಅಲ್ಲಿ? ನಂಗೆ ಯಾರಾದರೂ ಹೊಡೆಯೋಕೆ ಬಂದಿದ್ರಾ? ಈ ಕರ್ನಾಟಕದಲ್ಲಿ ನನ್ನ ಮೈ ಮುಟ್ಟೋಕೆ ಯಾವನಿಗಾದ್ರೂ ಆಗತ್ತಾ?’ ಎಂದು ಜಗ್ಗೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅನ್ಯ ಭಾಷಿಕರೆಲ್ಲ ಬಂದು ಕರ್ನಾಟಕದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಮಕ್ಕಳುಗಳನ್ನು ಬೆಳೆಯದ ರೀತಿಯಲ್ಲಿ ತುಳಿಯುತ್ತಿದ್ದಾರೆ. ಹಾಗಾದರೆ ಕನ್ನಡ ಇಂಡಸ್ಟ್ರೀ ಹಾಳಾಗಿಹೋಗಬೇಕಾ? ಹೇಳೋರು ಕೇಳೋರು ಯಾರೂ ಇಲ್ಲವಾ? ರಾಜ್‌ಕುಮಾರ್‌, ಅಂಬರೀಷ್‌, ವಿಷ್ಟುವರ್ಧನ್‌ ಸತ್ತ ಮರುದಿನ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದಿರುವುದು ನಾವು ಮೂರ್ನಾಲ್ಕು ಜನ ಮಾತ್ರ. ನಾನು, ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌, ರವಿಚಂದ್ರನ್‌ ಮಾತ್ರ. ನಾವು ಸತ್ತಮೇಲೆ ನಮ್ಮ ತಿಥಿ ಮಾಡಿ ಆನಂದಿಸಿ, ಸಂತೋಷಪಡಿ. ನಾನು ಒಬ್ಬ ದೀಕ್ಷೆ ಆಗಿರುವಂತಹ ಮನುಷ್ಯ. ಮಠ, ಮಾನ್ಯ, ದೇವರು ಅಂತ ಪೂಜೆ ಮಾಡಿಕೊಂಡು, ನಾನಾಯ್ತು ನನ್ನ ಬದುಕಾಯ್ತು ಎಂದುಕೊಂಡು ಇರುವಂತವನು. ನನಗೆ ನೀವು ನೋವು ಕೊಟ್ಟಿದ್ದೀರಿ’ ಎಂದು ಜಗ್ಗೇಶ್‌ ಬೇಸರ ತೋಡಿಕೊಂಡಿದ್ದಾರೆ.

‘ನನ್ನನ್ನು ಪ್ರೀತಿಸುವ ಕೋಟ್ಯಂತರ ಆತ್ಮಗಳಿವೆ. ನಿನ್ನೆ ಅಲ್ಲಿ ಅವರು ಆಡಿರುವ ಮಾತುಗಳನ್ನು ನಾನು ಎತ್ತಿದರೆ ಬೆಂಕಿ ಹಚ್ಚಿದಂತೆ ಆಗುವುದಿಲ್ಲವೇ? ನನ್ನ ಒಕ್ಕಲಿಗತನದ ಬಗ್ಗೆ ಮಾತನಾಡಿದಾಗ ನಾನು ಸುಮ್ಮನಿದ್ದೇನೆ. ಅಲ್ಲಿ 20 ಜನ ಹುಡುಗರು ಬಂದಿದ್ದರು. ಅವರಲ್ಲಿ ಉದ್ವೇಗ ಇತ್ತು. ಒಪ್ಪಿಕೊಳ್ಳುತ್ತೇನೆ. ನಾನು ಓಡಿ ಹೋಗಲಿಲ್ಲವಲ್ಲ. ಗಂಡಸು ಥರ ಇದ್ದುಕೊಂಡು ಮಾತಾಡಿದ್ದೇನೆ. ನನಗೆ ಅವರು ಬುದ್ದಿ ಕಲಿಸಬೇಕಾಗಿಲ್ಲ. ನನಗೆ ಬುದ್ದಿ ಕಲಿಸಬೇಕಾಗಿರುವುದು ರಾಘವೇಂದ್ರ ಸ್ವಾಮಿಗಳು, ಕನ್ನಡಿಗರು ಮತ್ತು ನನ್ನನ್ನು ಹೆತ್ತ ಜನ. ಯಾವ ಒಬ್ಬ ನಟ ಮತ್ತು ಅವನ ಅಭಿಮಾನಿಗಳು ನನ್ನ ಹತ್ತಿರ ಬರೋಕೆ ಆಗೋದಿಲ್ಲ. ಇನ್ನೂ ಹತ್ತಾರು ವರ್ಷ ನಾನು ಕನ್ನಡದ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ’ ಎಂಬುದು ಜಗ್ಗೇಶ್‌ ಮಾತುಗಳು.

‘ಇಂಥ ಸ್ಥಿತಿಗತಿಯನ್ನು ನೀವು ಬೆಳೆಸಿದರೆ ಚಿತ್ರರಂಗದಲ್ಲಿ ರೌಡಿಸಂ ಶುರು ಮಾಡುತ್ತಾರೆ. ಎಲ್ಲ ನಟರನ್ನೂ ಹೆಸರಿಸೋಕೆ ಶುರು ಮಾಡುತ್ತಾರೆ. ಅದನ್ನು ನೀವು ನಿಲ್ಲಿಸಲೇಬೇಕು. ಇದು ರೌಡಿಸಂ ಸೆಂಟರ್‌ ಅಲ್ಲ. ಇಲ್ಲಿ ಕೂತು-ನಿಂತು ಮಾತನಾಡಬೇಕು. ದೊಡ್ಡವರು-ಚಿಕ್ಕವರು ಇದ್ದಾರೆ. ಇವತ್ತು ಒಬ್ಬ ನಟನ ಸಿನಿಮಾ ಹಿಟ್‌ ಆಯ್ತು ಎಂದರೆ, ಮತ್ತೊಬ್ಬ ನಟ ಹುನ್ನಾರ ಮಾಡ್ತಾನೆ. ನಾವೆಲ್ಲರೂ ಬೆಳೆಯೋಣ ಎಂಬ ಭಾವನೆ ಇಲ್ಲ. ನಾನೊಬ್ಬನೇ ಬೆಳೆಯಬೇಕು ಎಂಬ ಸ್ಥಿತಿ ಬರ್ತಾ ಇದೆ. ಇದೆಲ್ಲ ನಮಗೆ ಗೊತ್ತಿಲ್ವಾ? ನಮಗೆ ಜನ ಇಲ್ವಾ? ಅದನ್ನೆಲ್ಲ ನಾನು ಮಾಡುವುದಿಲ್ಲ. ಹಿರಿಯರಿಗೆ ಅಪಮಾನ ಮಾಡುವಂತವರನ್ನು ಪ್ರೋತ್ಸಾಹಿಸಬೇಡಿ ಎಂದು ಕನ್ನಡಿಗರಲ್ಲಿ ನಾನು ವಿನಂತಿ ಮಾಡುತ್ತೇನೆ’ ಎಂದಿದ್ದಾರೆ ಜಗ್ಗೇಶ್‌.

Comments are closed.