ಕರಾವಳಿ

“ಮನಪಾದಲ್ಲಿ ಸರಕಾರಿ ಆದೇಶ ಗಾಳಿಗೆ ತೂರಿ ಗುತ್ತಿಗೆ ಕಾರ್ಮಿಕರ ಬಳಕೆ”: ಚಂದ್ರು ಆರೋಪ

Pinterest LinkedIn Tumblr

ಮಂಗಳೂರು: ರಾಜ್ಯ ಸರಕಾರ ಗುತ್ತಿಗೆ ಕಾರ್ಮಿಕ ರದ್ದತಿ ಕಾಯ್ದೆ 1970ರನ್ವಯ ರಾಜ್ಯದ ಐದು ಮಹಾನಗರ ಪಾಲಿಕೆಗಳಲ್ಲಿ ಗುತ್ತಿಗೆ ಕಾರ್ಮಿಕರ ಸೇವೆಯನ್ನು 10-11-2006ರಿಂದ ರದ್ದುಪಡಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ಗುತ್ತಿಗೆ ಪರವಾನಿಗೆಯನ್ನು ಕಾರ್ಮಿಕ ಇಲಾಖೆಯಿಂದ ಪಡೆಯದೇ ಈಗಲೂ ಹೊರಗುತ್ತಿಗೆ ಆಧಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿರುವುದು ನ್ಯಾಯಾಲಯ, ಜಿಲ್ಲಾಡಳಿತ, ಪೌರಾಡಳಿತ ಆದೇಶಗಳಿಗೆ ವಿರುದ್ಧವಾಗಿದೆ ಎಂದು ನೌಕರರ ವೇದಿಕೆ ಅಧ್ಯಕ್ಷ ಬಿಎಸ್ ಚಂದ್ರು ದೂರಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 1988ರಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ, ಗುತ್ತಿಗೆ ನೌಕರರ ಕುರಿತಂತೆ ರಾಜ್ಯ ಉಚ್ಛ ನ್ಯಾಯಾಲಯ 12-1-2020ರಲ್ಲಿ ಆದೇಶ ನೀಡಿದ್ದು 6 ತಿಂಗಳೊಳಗೆ ಕಾರ್ಮಿಕ ಇಲಾಖೆ ನೀರು ಸರಬರಾಜು ವ್ಯವಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿಗೆ ವರದಿ ನೀಡುವಂತೆ ಅದೇಶಿಸಿದ ಹಿನ್ನೆಲೆಯಲ್ಲಿ ವರದಿ ಸುಮಾರು 17 ವರ್ಷಗಳ ಹಿಂದೆ ಸಲ್ಲಿಕೆಯಾಗಿ ತಕ್ಷಣ ಎಲ್ಲಾ ಕಾರ್ಮಿಕರ ಸೇವೆಯನ್ನು ಖಾಯಂ ನೌಕರರೆಂದು ಸಕ್ರಮಗೊಳಿಸಲು ಕಾರ್ಮಿಕ ಆಯುಕ್ತರ ವರದಿ ಸಲ್ಲಿಸಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಯವರು ಜಿಲ್ಲಾ ಮಟ್ಟದ ಖಾಯಂ ನೇಮಕಾತಿಯ ಅಧ್ಯಕ್ಷರಾಗಿದ್ದು 16-7-2016 ಮತ್ತು 28-7-2016ರ ತಮ್ಮ ಸಭೆಯಲ್ಲಿ ಪೌರ ಕಾರ್ಮಿಕರು ಸೇರಿದಂತೆ ಭಗವಾನ್ ದಾಸ್ ಮತ್ತು ಇತರೆ ವಾಲ್ ಮೆನ್ ಗಳನ್ನು ಸೇವೆಯಲ್ಲಿ ಸಕ್ರಮಗೊಳಿಸಲು ಅನುಮತಿ ನೀಡಿರುತ್ತಾರೆ.

ಈ ಕುರಿತಂತೆ ಪೌರಾಡಳಿತ ಮತ್ತು ರಾಜ್ಯ ಸಚಿವ ಸಂಪುಟ ಸಭೆ ಅನುಮತಿ ನೀಡಿ ಅದೇಶಿಸಿರುತ್ತಾರೆ. ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಂದು 15 ವರ್ಷಾಗಳಾಗಿದ್ದು ನ್ಯಾಯಾಲಯ, ರಾಜ್ಯ, ಜಿಲ್ಲಾಡಳಿತದ ಆದೇಶಗಳನ್ನು ಜಾರಿಗೊಳಿಸುವಲ್ಲಿ ದಾಖಲೆಗಳನ್ನು ಬಹಿರಂಗಪಡಿಸದೆ ಈಗಲೂ ಕೆಲಸ ನಿರ್ವಹಿಸುತ್ತಿರುವ ವಾಲ್ ಮೆನ್ ಗಳನ್ನು ಹೊರಗುತ್ತಿಗೆ ಕಾರ್ಮಿಕರೆಂದು ಗುರುತಿಸುವ ಮಹಾನಗರ ಪಾಲಿಕೆಗೆ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಮತ್ತು ಸರಕಾರ ಕಠಿಣ ಕ್ರಮ ಜರುಗಿಸಬೇಕೆಂದು ಬಿಎಸ್ ಚಂದ್ರು ಒತ್ತಾಯಿಸಿದ್ದಾರೆ.

ಈ ಕುರಿತು ನ್ಯಾಯ ದೊರಕದಿದ್ದಲ್ಲಿ ಆದೇಶ ಜಾರಿಗೊಳಿಸಲು ವಿಫಲರಾದ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಯ ವಿರುದ್ಧ ಸಂಬಂಧಪಟ್ಟ ಪ್ರಾಧಿಕಾರ, ನ್ಯಾಯಾಲಯ ಮತ್ತು ಲೋಕಾಯುಕ್ತದಲ್ಲಿ ದಾವೆ ಹೂಡುವುದು ಅನಿವಾರ್ಯ ಎಂದು ವೇದಿಕೆಯ ಅಧ್ಯಕ್ಷ ಬಿಎಸ್ ಚಂದ್ರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಸಲಹೆಗಾರ ಪದ್ಮನಾಭ ಉಳ್ಳಾಲ, ಹೊರಗುತ್ತಿಗೆ ಕಾರ್ಮಿಕರಾದ ಭಗವಾನ್ ದಾಸ್, ವಾಮನ, ರಾಧಾಕೃಷ್ಣ, ಜಗದೀಶ್ ಅಂಗಡಿಗುಡ್ಡೆ ಮತ್ತಿತರರು ಹಾಜರಿದ್ದರು.

Comments are closed.