ಕರಾವಳಿ

ಯಕ್ಷಗಾನ ರಂಗದ ಧ್ರುವತಾರೆ, “ಯಕ್ಷಗಾನದ ಗಂಡುಗಲಿ, ಸಿಡಿಲ ಮರಿ ಡಾ.ಶ್ರೀಧರ ಭಂಡಾರಿ” – ಇನ್ನು ನೆನಪು ಮಾತ್ರ

Pinterest LinkedIn Tumblr

ಮಂಗಳೂರು : ‘ಸಿಂಹಕ್ಕೆ ವಯಸ್ಸಾದರೂ ಶೌರ್ಯಕ್ಕೆ ಮುಪ್ಪಿಲ್ಲ’ ಎಂಬ ಮಾತಿದೆ. ಬಹುಶಃ ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಈ ಮಾತು ಪುತ್ತೂರು ಡಾI ಶ್ರೀಧರ ಭಂಡಾರಿಯವರಿಗೆ ಸಲ್ಲುತ್ತದೆ. ದೇಹದಲ್ಲಿ ವಯಸ್ಸು ಕಾಣಿಸಲ್ಪಟ್ಟರೂ ತನ್ನ 70 ರ ಹರೆಯದಲ್ಲೂ ರಂಗಸ್ಥಳದಲ್ಲಿ ಸಿಡಿಲಮರಿಯಾಗಿ ಬಿಸಿ ರಕ್ತದ ಯುವಕರಂತೆ ರಂಗಸ್ಥಳ ಪುಡಿಗಟ್ಟುತ್ತಿದ್ದರು.

ಬಿಡಿ ನಾಟ್ಯಗಳ ಮೂಲಕ ಯಕ್ಷಲೋಕದಲ್ಲಿ ಹೊಸ ಆಯಾಮ ಸೃಜಿಸಿದ ಯಕ್ಷಕಲಾ‌ ಸಾಮ್ರಾಟ್, ದಿಗಿಣ ವೀರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಡಾI ಶ್ರೀಧರ ಭಂಡಾರಿಯವರು ವಿಧಿವಶರಾದರೆಂಬ ಸುದ್ದಿ ಯಕ್ಷಾಭಿಮಾನಿಗಳನ್ನು ದುಃಖತಪ್ತರನ್ನಾಗಿಸಿದೆ.

ಪುತ್ತೂರಿನ ಬನ್ನೂರಿನಲ್ಲಿ ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ್ ಜೊತೆಗಿನ ಸಂತೃಪ್ತ ಜೀವನ ಸಾಗಿಸುತ್ತಿದ್ದ ಶ್ರೀಧರ ಭಂಡಾರಿಯವರು 1945 ನೇ ಇಸವಿಯಲ್ಲಿ ಶೀನಪ್ಪ ಭಂಡಾರಿ ಹಾಗೂ ತಾಯಿ ಸುಂದರಿಯವರ ಸುಪುತ್ರನಾಗಿ ಜನಿಸುತ್ತಾರೆ.

ಇವರ ತಂದೆ, ತಾತ, ಮಾವಂದಿರೆಲ್ಲರೂ ಯಕ್ಷಗಾನ ಪರಂಪರೆಗೆ ಸೇರಿದವರು. ಹೀಗಾಗಿ ಈ ಕಲೆ ಬಳುವಳಿಯಾಗಿ ಪಡೆದ ಡಾ. ಶ್ರೀಧರ ಭಂಡಾರಿಗಳು ತಮ್ಮ ಜೀವನವನ್ನು ಇದೇ ಕ್ಷೇತ್ರಕ್ಕೆ ಮುಡಿಪಾಗಿಟ್ಟವರು. ಯಕ್ಷಗಾನದ ಮೂಲಪಾಠವನ್ನು ತಂದೆಯವರಿಂದ ಕಲಿತು ನಂತರ ಕುರಿಯ ವಿಠ್ಠಲ ಶಾಸ್ತ್ರಿಗಳು, ಹೊಸ ಹಿತ್ಲು ಮಾಲಿಂಗ ಭಟ್ಟರು ಮೊದಲಾದ ದಿಗ್ಗಜರಿಂದ ಯಕ್ಷಕಲೆಯ ಮತ್ತಷ್ಟುನ್ನು ಕಲಿತರು. ಗೋವಿಂಧ ಭಟ್ಟರು, ನಾರಾಯಣ ಭಟ್ಟರು ಹೀಗೆ ಹಲವು ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ ಯಕ್ಷ ಕಲೆಯನ್ನು ಮೈಗೂಡಿಸಿಕೊಂಡರು ಡಾ. ಶ್ರೀಧರ ಭಂಡಾರಿಗಳು.

ಯಕ್ಷಗಾನದ ಜೊತೆಗೆ ದಿ| ಕುದ್ಕಾಡಿ ವಿಶ್ವನಾಥ ರೈಗಳಿಂದ ಭರತನಾಟ್ಯವನ್ನೂ ಕಲಿತು, ಕುರಿಯ ವಿಠ್ಠಲ ಶಾಸ್ತ್ರಿಗಳಿಂದ ಯಕ್ಷಗಾನ ಅಭಿವ್ಯಕ್ತಿಯ ಆಂಗಿಕ ಅಭಿನಯದ ಪಾಠ ಹೇಳಿಸಿಕೊಂಡಿದ್ದಾರೆ. ಹೀಗೇ ಯಕ್ಷಕಲಾವಿದರೊಂದಿಗೆ ತಿರುಗಾಟ ಮಾಡುತ್ತಲೇ ಯಕ್ಷಕಲೆಯನ್ನು ಅಭ್ಯಾಸ ಮಾಡಿದ ಡಾ. ಶ್ರೀಧರ ಭಂಡಾರಿಗಳು 1970ನೇ ಇಸವಿಯಲ್ಲಿ ಯಕ್ಷಕ್ಷೇತ್ರಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು.

ಸುಮಾರು 2-3 ವರ್ಷಗಳ ಕಾಲ ತಮ್ಮ ತಂದೆಯವರೊಡನೆ ಸುಬ್ರಹ್ಮಣ್ಯ ಮೇಳ, ಬಳ್ಳಂಬೆಟ್ಟು ಮೇಳಗಳಲ್ಲಿ ತಿರುಗಾಟ ಮಾಡಿದರು. ಅದು ಯಕ್ಷಗಾನ ಬಹಳ ಬಡವಾಗಿದ್ದ ಕಾಲ. ದೊಂದಿ ಬೆಳಕು, ಗ್ಯಾಸ್ ಲೈಟ್‌ಗಳ ಬೆಳಕಿನಲ್ಲೇ ಯಕ್ಷಗಾನ ನಡೆಯುತ್ತಿತ್ತು. ಪ್ರಯಾಣಕ್ಕೂ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ, ಯಕ್ಷಗಾನದ ವೇಷ-ಭೂಷಣ, ಮೇಳದ ಪರಿಕರಗಳೊಡನೆ ಒಂದೂರಿನಿಂದ ಮತ್ತೊಂದೂರಿಗೆ ನಡೆದೇ ಸಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದರು.

ದಕ್ಷಿಣ ಕನ್ನಡದ ಹೆಗ್ಗುರುತಾಗಿರುವ ಯಕ್ಷಕಲೆಯನ್ನು ಡಾ. ಶ್ರೀಧರ ಭಂಡಾರಿಯಾದಿಯಾಗಿ ಅವರ ಒಡನಾಡಿಗಳು ಬೆಳೆಸಿಕೊಂಡು ಬಂದರು. ಭವಿಷ್ಯದಲ್ಲಾದರೂ ಯಕ್ಷಕಲೆಯ ಶ್ರೀಮಂತಿಕೆ ನಮ್ಮನ್ನು ಕಾಪಾಡಬಹುದು ಎಂದು ನಂಬಿ ಪ್ರತಿದಿನವೂ ಸಾಧನೆ ಮಾಡಿ ಈ ಕಲೆಯನ್ನು ಉಳಿಸಿಕೊಂಡು ಬಂದ ಹಲವು ಹಿರಿಯ ತಲೆಮಾರಿನ ಕಲಾವಿದರಲ್ಲಿ ಶ್ರೀಧರ ಭಂಡಾರಿಗಳೂ ಸೇರಿದ್ದಾರೆ.

ರಂಗದಲ್ಲಿ ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಮಾಡುವ ಸಾಧನೆಗೆ ತಕ್ಕ ಪ್ರತಿಫಲ ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ ಕಲಾವಿದ ವರ್ಗ ಅಂದು ಬಹಳ ದೊಡ್ಡ ಪ್ರಮಾಣದಲ್ಲಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಭಾರ್ಗವ ಹೀಗೆ ಹಲವು ಪಾತ್ರಗಳಿಗೆ ಮಾರ್ಗದರ್ಶಕ ರೂಪವಾಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳು, ಕೃಷನ್ ಬಾಬು ಹೀಗೆ ಹಲವು ಹಿರಿಯರ ಅಭಿವ್ಯಕ್ತಿಯನ್ನು ಅಳವಡಿಸಿಕೊಂಡು ಬೆಳೆಸಿದವರಲ್ಲಿ ಶ್ರೀಧರ ಭಂಡಾರಿಯವರು ಪ್ರಮುಖರು. ಮುಂದಿನ ತಲೆಮಾರಿನ ಕಲಾವಿದರಿಗೆ ಕುರಿಯ ವಿಠ್ಠಲ ಶಾಸ್ತ್ರಿಗಳಂತೆ ಆದರ್ಶ ಪ್ರಾಯರಾಗಿ ಬೆಳೆಯಬೇಕು ಎಂಬ ಹೆಬ್ಬಕೆಯಿಂದ ಯಕ್ಷಸೇವೆ ಮಾಡಿದ್ದಾರೆ ಇವರು.

1967ರಿಂದಲೇ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ, ಜೊತೆಗೆ ದುಬೈ, ಬೆಹರೈನ್, ಲಂಡನ್, ಜಪಾನ್, ಟೊಕಿಯೋ, ಅಮೇರಿಕದಂತಹ ದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ ಹೆಮ್ಮೆ ಇವರದ್ದು. ಹಿಮ್ಮೇಳದಲ್ಲಿ ಹಲವು ಭಾಗವತರು, ಚೆಂಡೆಯ ನುರಿತ ಕಲಾವಿದರು ನನಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಹೀಗಾಗಿಯೇ ನನ್ನ ಬೆಳವಣಿಗೆ ಸಾಧ್ಯವಾಯಿತು ಎಂಬುದನ್ನು ಸ್ಮರಿಸುತ್ತಾರೆ ಡಾ. ಶ್ರೀಧರ ಭಂಡಾರಿಗಳು. ಯಕ್ಷಲೋಕದಲ್ಲಿ ಡಾ. ಶ್ರೀಧರ ಭಂಡಾರಿಯವರಿಗೆ ಅವರದ್ದೇ ಆದ ಹೆಸರಿದೆ. ಮುಂದೆ ತಮ್ಮದೇ ಆದ ಯಕ್ಷಗಾನ ತಂಡ ಕಟ್ಟಿಕೊಂಡು ಮೈಸೂರು, ಬೆಂಗಳೂರು, ಮುಂಬೈ ಜೊತೆಗೆ ವಿದೇಶಗಳಿಗೂ ಹೋಗಿ ಪ್ರದರ್ಶನ ಕೊಟ್ಟು ಬಂದ ಹೆಗ್ಗಳಿಕೆ ಇವರಿಗಿದೆ.

ಡಾ. ಶ್ರೀಧರ ಭಂಡಾರಿಯವರು ಯಕ್ಷಗಾನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಮುಂಬೈ ಬಂಟರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. 2020 ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವರಾಮ ಕಾರಂತ ಪ್ರಶಸ್ತಿಯೂ ಬಂದಿದೆ. ಜೊತೆಗೆ ಉಡುಪಿ ಪೇಜಾವರ ಶ್ರೀ, ಎಡನೀರು ಸ್ವಾಮಿಗಳು, ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರಿಂದಲೂ ಗೌರವ-ಪ್ರಶಸ್ತಿಗಳು ಸಂದಿವೆ. ನೂರಾರು ಸಂಘ ಸಂಸ್ಥೆಗಳು ಇವರ ಕಲಾಸೇವೆಗೆ ಗೌರವಾರ್ಪಣೆ ಸಲ್ಲಿಸಿವೆ.

Comments are closed.