ಕರಾವಳಿ

‘ಸುಳ್ಯ ರಂಗಮನೆ ಪ್ರಶಸ್ತಿ’ಗೆ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅಯ್ಕೆ

Pinterest LinkedIn Tumblr

ಮಂಗಳೂರು: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಸಂಸ್ಥೆಯು ಪ್ರತಿವರ್ಷ ಕೊಡಮಾಡುವ 2021 ನೇ ಸಾಲಿನ ‘ಸುಳ್ಯ ರಂಗಮನೆ ಪ್ರಶಸ್ತಿ’ಗೆ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ.

ನಲವತ್ತು ವರ್ಷಗಳಿಂದ ರಂಗಭೂಮಿ ಮತ್ತು ಚಲನ ಚಿತ್ರರಂಗದಲ್ಲಿ ನಟ,ನಿರ್ದೇಶಕನಾಗಿ ಮಿಂಚಿದ ಚಂದ್ರು ಅವರು ತನ್ನದೇ ಆದ ಅಭಿನಯ ಶೈಲಿ,ಮಾತಗಾರಿಕೆಯಿಂದ ಪ್ರಸಿದ್ಧರಾದವರು. ಹಾಸ್ಯ ಮತ್ತು ಖಳನಾಯಕನಾಗಿ ಮಿಂಚಿದ ಚಂದ್ರು ಅವರ ಮುಖ್ಯಮಂತ್ರಿ ನಾಟಕ ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡ ಜನಪ್ರಿಯ ರಾಜಕೀಯ ನಾಟಕವಾಗಿರುತ್ತದೆ.

ಗೌರಿಬಿದನೂರಿನಲ್ಲಿ ಶಾಸಕರಾಗಿಯೂ ಸೇವೆ ಸಲ್ಲಿಸಿದ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕನ್ನಡ ನಾಡು ನುಡಿ ಗಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ
ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ.

ಇಂಗ್ಲೇಂಡ್, ಮ್ಯಾಂಚಿಸ್ಟೇರ್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ಪ್ಯಾರೀಸ್ ನಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನ,ಅಮೇರಿಕದ ಅಕ್ಕ ಸಮ್ಮೇಳನ ಮುಂತಾದೆಡೆ ಕನ್ನಡದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಇವರ ರಂಗಭೂಮಿ ಮತ್ತು ಕನ್ನಡ ಸೇವೆಯನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಇವರು ಅಭಿನಯಿಸಿದ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿರುತ್ತದೆ.ಐನೂರಕ್ಕೂ ಅಧಿಕ ಚಲನಚಿತ್ರದಲ್ಲಿ ಅಭಿನಯಿಸಿದ, ಈಗಲೂ ನಾಟಕಗಳಲ್ಲಿ ಅಭಿನಯಿಸುತ್ತಾ ಕೋಟ್ಯಾಂತರ ಕನ್ನಡಿಗರ ಮನಗೆದ್ದ ಚಂದ್ರು ಅವರನ್ನು ಈ ವರ್ಷದ ರಂಗಮನೆ ಪ್ರಶಸ್ತಿಗೆ ಸಮಿತಿಯು ಆಯ್ಕೆ ಮಾಡಿರುತ್ತದೆ.

ಪ್ರಶಸ್ತಿಯು ಹತ್ತು ಸಾವಿರ ನಗದು ಸೇರಿದಂತೆ ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿರುತ್ತದೆ. ಮಾರ್ಚ್ 14 ರಂದು20 ನೇ ವರ್ಷದ ರಂಗಸಂಭ್ರಮದ ಸಂದರ್ಭದಲ್ಲಿ, ರಂಗಮನೆಯಲ್ಲಿ ನಡೆಯುವ 8 ದಿನಗಳ ಬಹುಭಾಷಾ ನಾಟಕೋತ್ಸವದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Comments are closed.