ಕರಾವಳಿ

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ಮೋಸ ಮಾಡಿದ ಆರೋಪಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ಉಡುಪಿ ತಾಲೂಕಿನ ರಿಚ್ಚಿ ಕಂಪೌಂಡ್, ನೆಹರು ನಗರ, ಕೊಟೇಕಾರ್ ಇಲ್ಲಿ ವಾಸವಾಗಿರುವ ಕೆ.ಪಿ ಸುರೇಶ್ ಎಂಬಾತನು, ಪಿ.ವಿ ರಾಜು, ರಾಜೇಶ್ ಮತ್ತು ವಿಜಯ್ ಕುಮಾರ್ ಎಂಬುವವರ ಜೊತೆ ಸೇರಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ 2010, ಜುಲೈ 17 ರಂದು ಉಡುಪಿ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಕೆ.ಪಿ ಸುರೇಶ್ ಎಂಬಾತನು ಹೋಗಿ, ನಕಲಿ ವಿಳಾಸ ನೀಡಿ, 4 ಚಿನ್ನದ ಬಳೆಗಳನ್ನು ಅಡವಿರಿಸಿ 41,500 ರೂ. ಸಾಲ ಪಡೆದುಕೊಂಡಿರುವುದಾಗಿ ಹಾಗೂ ಆ ಸಮಯದಲ್ಲಿ ಪಿ.ವಿ ರಾಜು, ರಾಜೇಶ್ ಮತ್ತು ವಿಜಯ್ ಕುಮಾರ್ ಎಂಬುವವರು ಸಂಸ್ಥೆಯ ಹೊರಗಡೆ ನಿಂತು ಆರೋಪಿ ಕೆ.ಪಿ ಸುರೇಶ್ ಕೃತ್ಯಕ್ಕೆ ಸಹಕರಿಸಿರುವುದಾಗಿ ಉಡುಪಿ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ವ್ಯವಸ್ಥಾಪಕ ಶೈಲೇಶ್ ಆರ್.ಕೆ ದೂರು ನೀಡಿದ್ದಾರೆ.

ಕೆ.ಪಿ ಸುರೇಶ್ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆರೋಪಿಗಳೆಲ್ಲರೂ ಸೇರಿ ಸಂಸ್ಥೆಗೆ ಮೋಸ ಮಾಡಿರುವುದರಿಂದ ಸದ್ರಿ ಆರೋಪಿಗಳ ಮೇಲೆ ಕಲಂ 417 ಮತ್ತು 420 ಜೊತೆಗೆ 34 ರಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯ ಹಿಂದಿನ ಪಿಎಸ್‌ಐ ಸಂಪತ್ ಕುಮಾರ್ ತನಿಖೆ ನಡೆಸಿ, ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್, ಈ ಪ್ರಕರಣದ 1 ನೇ ಆರೋಪಿತನ ವಿರುದ್ಧದ ಆರೋಪವು ರುಜುವಾತಾಗಿದ್ದು, 1 ನೇ ಆರೋಪಿತನಿಗೆ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ 1,000 ರೂ. ದಂಡ ರೂಪದ ಶಿಕ್ಷೆ ವಿಧಿಸಿದೆ. ದಂಡ ಕಟ್ಟಲು ತಪ್ಪಿದಲ್ಲಿ 30 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ಫೆಬ್ರವರಿ 15 ರಂದು ತೀರ್ಪು ನೀಡಿರುತ್ತಾರೆ. ಆದರೆ ಈ ಆರೋಪಿಯು ಈಗಾಗಲೇ ಜೆ.ಸಿ ಯಲ್ಲಿದ್ದು, ಶಿಕ್ಷೆ ಅನುಭವಿಸಿರುವುದರಿಂದ ಈ ಪ್ರಕರಣವನ್ನು ಸೆಟ್ ಅಪ್ ಮಾಡಲಾಗಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ. ಕೆ ವಾದ ಮಂಡಿಸಿದ್ದು, ಕಾನೂನು ಅಧಿಕಾರಿ ಮುಮ್ತಾಜ್ ಸಾಕ್ಷಿ ವಿಚಾರಣೆ ನಿರ್ವಹಿಸಿದ್ದರು.

Comments are closed.