ಕರಾವಳಿ

ಅಪ್ಪ ಮಗನ ರಾಜಕೀಯ ದೊಂಬರಾಟ: ಒಂದೆಡೆ ಅಲ್ಪಸಂಖ್ಯಾತರ ಓಲೈಕೆ, ಮತ್ತೊಂದೆಡೆ ಮುಂದಿನ ಚುನಾವಣೆ ಮೇಲೆ ಕಣ್ಣು

Pinterest LinkedIn Tumblr

ಜೆಡಿಎಸ್ ಎಂಬ ಕರ್ನಾಟಕದ ಪ್ರಾದೇಶಿಕ ಪಕ್ಷ ಜನರ ಭಾವನೆಗಳ ಮೇಲೆ ಆಟವಾಡಿಕೊಂಡು ತನ್ನ ಅಸ್ತಿತ್ವವನ್ನು ಈ ತನಕ ಕಾಪಾಡಿಕೊಂಡು ಬಂದಿದೆ. ಪ್ರಸ್ತುತ ತನ್ನ ಇರುವಿಕೆಯನ್ನು ಗೊತ್ತುಪಡಿಸಲು ಪಕ್ಷದ ಹಿರಿಯ ಜೀವ ಜೆಡಿಎಸ್ ಸುಪ್ರಿಮೊ ಎನಿಸಿಕೊಂಡಿರುವ ಮಾಜಿ ಪ್ರಧಾನಿ ದೇವೆಗೌಡರು ಬಿಜೆಪಿ ಜೊತೆಗಿನ ಪಕ್ಷ ಮೈತ್ರಿ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.

ಆದರೆ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶ್ರೀರಾಮ ಮಂದಿರ ದೇಣಿಗೆ ವಿಚಾರದ ಬಗ್ಗೆ ಇಲ್ಲಸಲ್ಲದ ಟ್ವೀಟ್ ಸರಣಿಯನ್ನು ಆರಂಭಿಸಿ, ಅಲ್ಪಸಂಖ್ಯಾತರ ಮನಗೆಲ್ಲುವತ್ತ ಮುಖ ಮಾಡಿದ್ದಾರೆ. ಜನಸಾಮಾನ್ಯರ ದೈನಂದಿನ ಬದುಕಿನ ಕಷ್ಟಗಳನ್ನು ಅರಿಯದ ಇವರೀರ್ವರು, ಜನರ ಭಾವನೆಗಳ ಮೇಲೆ ತಮ್ಮ ರಾಜಕೀಯದ ಸೌಧವನ್ನು ಕಟ್ಟಿ, ಬೆಳೆಸಿ ಪ್ರಸ್ತುತ ಉಳಿಸಲು ಹರಸಾಹಸ ಪಡುತ್ತಿದ್ದಾರೆ.

ದೇಶದ ಪ್ರತಿ ರಾಜ್ಯಗಳಲ್ಲೂ ಪ್ರಾದೇಶಿಕ ಹಿತಾಸಕ್ತಿಯನ್ನು ಉಳಿಸುವ ಉದ್ದೇಶದಿಂದ ದಶಕಗಳ ಹಿಂದೆಯೇ ಸ್ಥಳೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಅದೇ ಪ್ರಾದೇಶಿಕತೆ ಅಂದರೆ ಭಾಷೆ, ನೆಲ, ಮಣ್ಣಿನ ಬಗ್ಗೆ ಕಾಳಜಿ. ಸ್ವಾಭಿಮಾನದಿಂದ ಬದುಕುವ ರೈತರ ಮತ್ತು ಜನಸಾಮಾನ್ಯರ ಪಕ್ಷವಾಗಿ ಜೆ.ಡಿ.ಎಸ್ ಬೆಳೆದು ಹಸನಾಗಿತ್ತು.

ಆದರೆ ತೆನೆ ಹೊತ್ತ ಮಹಿಳೆಗೆ ಆ ಪಕ್ಷದಲ್ಲಿ ಸ್ವಾಭಿಮಾನದಿಂದ ಬದುಕಲು ಕಷ್ಟ ಎನ್ನುವ ದುಸ್ಥಿತಿ ಎದುರಾಗಿದೆ. ಎಚ್.ಡಿ. ದೇವೆಗೌಡರು ಮುಂದಿನ ಬೆಳಗಾವಿ ಲೋಕಸಭಾ ಕ್ಷೇತ್ರ ಸಹಿತ ಮಸ್ಕಿಯಲ್ಲಿ ನಡೆಯುವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಅಭ್ಯಥಿಯನ್ನು ಇಳಿಸದೆ, ಭಾ.ಜ.ಪ. ಕ್ಕೆ ಸಹಾಯ ಮಾಡಿಲಿದ್ದೇವೆ ಎನ್ನುವ ಪರೋಕ್ಷ ಹೇಳಿಕೆಯನ್ನು ನೀಡಿದರೆ, ಮತ್ತೊಂದೆಡೆ ಇವರ ಪುತ್ರ ಕುಮಾರಸ್ವಾಮಿ ಶ್ರೀರಾಮ ಮಂದಿರ ದೇಣಿಗೆಯ ಬಗ್ಗೆ ಇಲ್ಲಸಲ್ಲದ ಮಾತನಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ.

ಊಹಾಪೋಹಕ್ಕೆ ಎಡೆಮಾಡಿಕೊಡುವಂತಿರುವ ಎಚ್.ಡಿ.ಕೆ. ಟ್ವೀಟ್‌ಗಳು ಅವರೇ ಮಾಡಿದವೋ, ಅಲ್ಲವೋ ಎಂಬ ಸಂಶಯ ಹಲವರಿಗಿದೆ. ಶ್ರೀರಾಮ ಮಂದಿರ ದೇಣಿಗೆ ದುರ್ಬಳಕೆಯ ಬಗ್ಗೆ ಮಾತನಾಡುವ ಇವರಿಗೆ ಈ ತನಕ ಎಷ್ಟು ಹಣ ಸಂಗ್ರಹವಾಗಿದೆ ಎಂಬುವುದರ ಬಗ್ಗೆ ಒಟ್ಟು ಮಾಹಿತಿ ನೀಡಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ನೀಡಿರುವ ಮಾಹಿತಿ ವಿಚಾರದ ಬಗ್ಗೆ ಅರಿವಿಲ್ಲ.

ದೇಣಿಗೆ ಸಂಗ್ರಹಿಸಲು ಆಗಮಿಸಿದವರನ್ನು ಪೋಲಿ, ಪುಂಡರು ಎಂದು ಸಂಬೋಧಿಸಿರುವ ಹೆಚ್.ಡಿ.ಕೆ. ಒಂದು ಸಂಸ್ಥೆ ಅಥವಾ ಸಂಘಟನೆಗೆ ಗೌರವ ನೀಡದಷ್ಟೂ ಅವಿವೇಕಿಯಾಗಿಬಿಟ್ಟಿದ್ದಾರೆ. ದೇಣಿಗೆ ಕೊಟ್ಟವರು ಮತ್ತು ಕೊಡದವರು ಎಂದು ಗೊತ್ತಾಗುವಂತೆ ಮನೆಗಳಲ್ಲಿ ಸ್ಟಿಕ್ಕರ್ ಅಂಟಿಸುತ್ತಾರೆ ಎಂಬ ಸುದ್ದಿ ಹಾಸ್ಯಾಸ್ಪದ ಮಾತ್ರವಲ್ಲ, ಸತ್ಯದಿಂದ ದೂರವಾಗಿರುವ ವಿಷಯ.

ಸ್ಟಿಕ್ಕರ್ ಕೆಲವು ಭಾಗಗಳಲ್ಲಿ ಇರುವುದು ನಿಜ. ಆದರೆ ಆ ಸ್ಟಿಕ್ಕರ್ ಮನೆಯವರಿಗೆ ನೆನಪಿನ ಭಾಗವಾಗಿ ಕೊಡಲಾಗುತ್ತದೆ. ಕಾರ್ಯಕರ್ತರೆ ಸ್ವಯಂ ಆಗಿ ದುರದ್ದೇಶವಿಟ್ಟುಕೊಂಡು ಸ್ಟಿಕ್ಕರ್ ಅಂಟಿಸುವ ಚಾಳಿಗೆ ಮುಂದಾಗಿಲ್ಲ ಎಂಬುದು ಸತ್ಯ.

ಹಣ ಬಳಕೆ, ಈ ಹಿಂದಿನ ಲೆಕ್ಕ, ಒಂದು ಸಂಘಟನೆಗೆ ಸೇರಿದ ದೇಗುಲ ಎಂಬ ವಿಚಾರಗಳ ಬಗ್ಗೆಯೂ ಇಲ್ಲಸಲ್ಲದ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕೆ.ಗೆ ಸಂಘಟನೆಯ ಮೂಲಕ ಸಮರ್ಪಕ ಉತ್ತರ ಈಗಾಗಲೇ ದೊರಕಿದೆ. ಶ್ರೀರಾಮ, ಮಂದಿರದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದಿರುವ ಇವರೇ ಈಗ ಶ್ರೀರಾಮನ ಹೆಸರನ್ನು ದುರುಪಯೋಗಿಸಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವಂತೆ ಗೋಚರಿಸುತ್ತಿದೆ.

ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಸ್ತಾಪಿಸುವುದು, ಹಿಂದೂ ಧರ್ಮ, ಭಾವನೆಗಳನ್ನು ಪರೀಕ್ಷಗೆ ಒಡ್ಡುವುದನ್ನೇ ಚಾಳಿ ಮಾಡಿಕೊಂಡಿರುವ ಹೆಚ್.ಡಿ.ಕೆ. ಹಣ ದುರ್ಬಳಕೆ ವಿಚಾರದ ಬಗ್ಗೆಯೂ ಮಾತಿಗಿಳಿದಿದ್ದಾರೆ. 1989 ರಲ್ಲಿ ಸಂಗ್ರಹಿಸಿದ ಇಟ್ಟಿಗೆ, ಹಣ, ಸ್ಟೀಲ್ ಪ್ರಮಾಣ ಎಷ್ಟು, ಅದು ಏನಾಯಿತು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಒಟ್ಟಾರೆ ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದು ಯಾರನ್ನು ಓಲೈಸಿ, ಯಾರ ಜೊತೆ ಮೈತ್ರಿ ಮಾಡಲು ಹೊರಟಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.

ಈ ಮಧ್ಯೆ ಟೂಲ್ ಕಿಟ್ ಸೃಷ್ಠಿಕರ್ತೆ ದಿಶಾ ರವಿಯನ್ನು ಸಮರ್ಥಿಸಿರುವ ಹೆಚ್.ಡಿ.ಕೆ. ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಆಳುವ ಸರಕಾರ ಕೈ ಹಾಕಿದೆ, ತುರ್ತು ಪರಿಸ್ಥಿತಿ ಕಾಲಘಟ್ಟವನ್ನು ನೆನಪಿಸುವಂತಿದೆ ಎಂದಿದ್ದಾರೆ. ಅತ್ತ ಜೆ.ಡಿ.ಎಸ್. ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೆಗೌಡ ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎನ್ನುವ ಮಾತಿಗಿಳಿದಿದ್ದಾರೆ.

ಪ್ರಸ್ತುತ ಮುಳುಗುತ್ತಿರುವ ಹಡಗಾಗಿರುವ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಸುನಾಮಿ ದೊಡ್ಡ ಗಂಡಾಂತರವಾಗಿದೆ. ಅಪ್ಪ ಮಗ ಇಬ್ಬರೂ ಹಲವು ಬಣ್ಣ ಬಳಿದು ಓಲೈಕೆ ನಾಟಕ ಮಾಡಿ ಪಕ್ಷ ಕಾಪಾಡುವ ಕಾಯಕದಲ್ಲಿ ತೊಡಗಿದ್ದಾರೆ. ಜಾತಿ ರಾಜಕೀಯ, ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಹೆಚ್.ಡಿ. ದೇವೇಗೌಡರು ಪ್ರಸ್ತುತ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಶ್ರಮ ಮತ್ತು ಶ್ರಮಿಕರನ್ನೇ ಮರೆತು ಮುಂದಡಿಯಿಟ್ಟಿರುವ ಹೆಚ್.ಡಿ.ಕೆ. ಟ್ವೀಟ್ ಕೇವಲ ಸಣ್ಣ ಕಿಡಿಯನ್ನು ಹಬ್ಬಿಸುವ ಮೂಲಕ ಪಕ್ಷದೊಳಗಿನ ಭಿನ್ನ ನಡೆಯನ್ನು ಮುಂದಿಟ್ಟಿದ್ದಾರೆ. ಅಪ್ರಸ್ತುತವಾಗುವ ಪಕ್ಷ, ವ್ಯಕ್ತಿಗಳು ತಾವು ಪ್ರಸ್ತುತವಾಗಿದ್ದೇವೆ ಎನ್ನಲು ಟ್ವೀಟ್ ಮಾತ್ರವಷ್ಟೇ ಉಳಿದಿದೆ!

ಕೃಪೆ: ✍️ವಿವೇಕಾದಿತ್ಯ ಕೆ.

Comments are closed.