ರಾಷ್ಟ್ರೀಯ

ದೇಶದ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಜೊತೆಗೆ ಖಾಸಗಿ ವಲಯಕ್ಕೂ ಗೌರವ ನೀಡಬೇಕಾಗಿದೆ: ಮೋದಿ

Pinterest LinkedIn Tumblr

ಮುಂಬೈ: ಆರ್ಥಿಕ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಕಟವಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೀತಿ ಆಯೋಗದ ಆಡಳಿತಾತ್ಮಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸರ್ಕಾರದ ಆತ್ಮ ನಿರ್ಭರ್ ಭಾರತ ಕಾರ್ಯಕ್ರಮದ ಭಾಗವಾಗಲು ಖಾಸಗಿ ವಲಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕು ಎಂದರು.

ದೇಶದ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆರ್ಥಿಕ ಪ್ರಗತಿಗಾಗಿ ಸರ್ಕಾರವು ಖಾಸಗಿ ವಲಯಕ್ಕೆ ಗೌರವ ನೀಡಬೇಕಾಗಿದೆ ಎಂದು ಹೇಳಿದರು.

ದೇಶ ಅತ್ಯುನ್ನತ ವೇಗದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಅಂಶಗಳನ್ನೊಳಗೊಂಡ 2021-22ನೇ ಸಾಲಿನ ಕೇಂದ್ರ ಬಜೆಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸರ್ಕಾರ ಕೈಗೊಂಡಿರುವ ಉಪಕ್ರಮಗಳು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಎಲ್ಲರಿಗೂ ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ಅವಕಾಶ ನೀಡುತ್ತದೆ ಎಂದು ಮೋದಿ ಹೇಳಿದರು.

ಕೃಷಿ ಕ್ಷೇತ್ರವನ್ನು ಉಲ್ಲೇಖಿಸಿದ ಪ್ರಧಾನಿ, ಖಾದ್ಯ ತೈಲದಂತಹ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪ್ರಯತ್ನ ಮಾಡಬೇಕಾಗಿದೆ. ಅಲ್ಲದೇ ಅವುಗಳ ಆಮದನ್ನು ನಿಯಂತ್ರಿಸಬೇಕಾಗಿದೆ. ರೈತರಿಗೆ ಮಾರ್ಗದರ್ಶನ ಮೂಲಕ ಇದನ್ನು ಸಾಧಿಸಬೇಕಾಗಿದೆ. ಆಮದಿನ ಮೇಲೆ ಖರ್ಚು ಮಾಡುವ ಹಣವನ್ನು ರೈತರ ಖಾತೆಗಳಿಗೆ ಹಾಕಬಹುದಾಗಿದೆ ಎಂದರು.

ಜನರ ಮೇಲಿನ ಹೊರೆ ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ತಂತ್ರಜ್ಞಾನದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿಯಮಗಳನ್ನು ಕಡಿಮೆ ಮಾಡಲು ಸಮಿತಿಗಳನ್ನು ರಚಿಸುವಂತೆ ರಾಜ್ಯಗಳಿಗೆ ಹೇಳಿದರು.

Comments are closed.