ಕರಾವಳಿ

ಯಕ್ಷರಂಗದ ಧ್ರುವತಾರೆ – ಧರ್ಮಸ್ಥಳ ಮೇಳದ ಕಲಾವಿದ ಸಿಡಿಲಮರಿ ಪುತ್ತೂರು ಶ್ರೀಧರ ಭಂಡಾರಿ ಅಸ್ತಂಗತ

Pinterest LinkedIn Tumblr

 ಮಂಗಳೂರು, ಫೆಬ್ರವರಿ.19: ತೆಂಕು ತಿಟ್ಟಿನ ಪುಂಡುವೇಷಕ್ಕೆ ತನ್ನ ಅಚ್ಚರಿಯ ಪ್ರತಿಭೆಯ ಮೂಲಕ ಅದ್ಭುತ ಛಾಪನ್ನು ಮೂಡಿಸಿದ, ಪುತ್ತೂರು ಶ್ರೀಧರ ಭಂಡಾರಿ (76ವರ್ಷ) ಇಂದು ಮುಂಜಾನೆ (19-02-2021) ದೈವಾಧೀನ ರಾದರು.

ಯಕ್ಷಗಾನ ರಂಗದ ಧ್ರುವತಾರೆಯೆನಿಸಿದ್ದ ಅವರು ರಂಗಸ್ಥಳದ ಮೇಲೆ ಸಿಡಿಲ ಮರಿಯಂತೆ ಮೆರೆದ ಸರ್ವಶ್ರೇಷ್ಠ ಪುಂಡುವೇಷಧಾರಿ.

10ನೇ ವರ್ಷಕ್ಕೆ ತಿರುಗಾಟದ ಮೇಳ ಸೇರಿ ನಿರಂತರ 6 ದಶಕಗಳ ಕಾಲ ವೃತ್ತಿ ಕಲಾವಿದರಾಗಿ ಯಕ್ಷಲೋಕದಲ್ಲಿ ತನ್ನ ಚುರುಕಾದ ನೃತ್ಯದಿಂದ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಅಶ್ವತ್ಥಾಮ, ಮನ್ಮಥ,ಪರಶುರಾಮ, ಲಕ್ಷ್ಮಣ, ಕುಶ-ಲವ, ಭಾನುಕೋಪ, ಮಾರ್ತಾಂಡತೇಜ, ಅಣ್ಣಪ್ಪ, ದೇವುಪೂಂಜ ಮುಂತಾದ ಪಾತ್ರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳವೊಂದರಲ್ಲೇ 4 ದಶಕಗಳಿಗಿಂತಲೂ ಹೆಚ್ಚುಕಾಲ ವೇಷಧಾರಿಯಾಗಿ ಕಲಾ ಸೇವೆಗೈದ ಇವರು ಈ ಬಾರಿಯ ಧರ್ಮಸ್ಥಳದ ಸೇವೆಯಾಟದಲ್ಲಿ ಕೊನೆಯದಾಗಿ ಕೃಷ್ಣನ ವೇಷವನ್ನು ಸೊಗಸಾಗಿ ನಿರ್ವಹಿಸಿದ್ದರು.

ಪುತ್ತೂರು ಹಾಗೂ ಕಾಂತಾವರ ಮೇಳಗಳನ್ನು ಆರಂಭಿಸಿ ತಲಾ 3 ವರ್ಷಗಳ ಕಾಲ ಮೇಳವನ್ನು ಮುನ್ನಡೆಸಿದರು.

ಮಳೆಗಾಲದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರದರ್ಶನ ನಡೆಸುತ್ತಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಧರ ಭಂಡಾರಿಯವರಿಗೆ ಅಮೇರಿಕಾದ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ನೀಡಿದೆ. ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.

*ಕಂಬನಿ*:

ಶ್ರೀಧರ ಭಂಡಾರಿ ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ , ಕಾರ್ಯದರ್ಶಿ ಮುರಲಿ ಕಡೆಕಾರ್ , ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಶ್ರೀಕೃಷ್ಣ ಯಕ್ಷಸಭಾದ ಸುಧಾಕರ ರಾವ್ ಪೇಜಾವರ,ಮುಂಬಯಿ ಕಲಾಜಗತ್ತಿನ ತೋನ್ಸೆ ವಿಜಯಕುಮಾರ್ ಶೆಟ್ಟಿ, ಅಜೆಕಾರ್ ಕಲಾಭಿಮಾನಿ ಬಳಗದ ಅಜೆಕಾರ್ ಬಾಲಕೃಷ್ಣ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ,ಕಲಾ ಸಂಘಟಕ ಕರ್ನೂರು ಮೋಹನ್ ರೈ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ, ಕದ್ರಿ ಹವ್ಯಾಸಿ ಬಳಗದ ಶರತ್ ಕುಮಾರ್ ಕದ್ರಿ, ಪ್ರಸಂಗಕರ್ತ ಡಾ.ದಿನಕರ ಎಸ್.ಪಚ್ಚನಾಡಿ ಮತ್ತಿತರ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.