ಕರಾವಳಿ

ಲಂಚ ಸ್ವೀಕಾರ ಆರೋಪ ಸಾಭೀತು : ಹೆಡ್ ಕಾನ್ಸ್ಟೇಬಲ್‌‌ಗೆ ಮೂರು ವರ್ಷ ಜೈಲು ಶಿಕ್ಷೆ ಪ್ರಕಟ

Pinterest LinkedIn Tumblr

ಮಂಗಳೂರು : ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಪ್ರಕಾಶ್. ಎಸ್. ಇವರ ವಿರುದ್ಧ ಮಾಡಿರುವ ಲಂಚ ಸ್ವೀಕಾರದ ಆರೋಪ ಸಾಭೀತಾಗಿದ್ದು, ಆರೋಪಿಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ದಿನಾಂಕ 06-07-2011 ರಂದು ಪ್ರಕರಣದ ಪಿರ್ಯಾದಿ ಫಾರೂಕ್ ಎಂಬವರಿಂದ ಎಫ್. ಐ. ಆರ್. ದಾಖಲಿಸಲು ರೂ. 1,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಪ್ರಸ್ತುತ ಪುತ್ತೂರು ಟೌನ್ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಆರೋಪಿ ಪ್ರಕಾಶ್ ಎಸ್. ನನ್ನು ಬಂದಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಅವರು ತೀರ್ಪು ನೀಡಿದ್ದು, ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 5,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 2 ವರ್ಷ ಸಾದಾ ಸಜೆ ಮತ್ತು 5,000/- ದಂಡ. ಆರೋಪಿ ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ದಿನಾಂಕ 19-02-2021 ರಂದು ನ್ಯಾಯಾಲಯ ಆದೇಶಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

“ಮೇಲಿನ ಪ್ರಕರಣದಲ್ಲಿ ಪಿರ್ಯಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಭ್ರಷ್ಟಾಚಾರದಂತಹ ಗಂಭೀರ ಪ್ರಕರಣದಲ್ಲಿ ಪಿರ್ಯಾದಿದಾರರು ತಮ್ಮ ಪಿರ್ಯಾದಿಯಲ್ಲಿ ಹೇಳಿದ ವಿಚಾರಕ್ಕೆ ವ್ಯತಿರಿಕ್ತ ಸಾಕ್ಷಿ ನೀಡಿದರೂ ಸಹ ಇತರೇ ಸಾಂಧರ್ಬಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿತನನ್ನು ಶಿಕ್ಷೆಗೆ ಒಳ ಪಡಿಸಬಹುದು ಎಂದು ಸರ್ವೋಚ್ಛ ನ್ಯಾಯಲಯದ ತೀರ್ಪನ್ನು ಮತ್ತು ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ರವರ ವಾದವನ್ನು ಪರಿಗಣಿಸಿ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ” ಇದು ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.

ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.

Comments are closed.