ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಲಕ್ಷಾಂತರ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಚಿನ್ನ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರನ್ನು ಫಾತಿಮಾ(47) ಹಾಗೂ ಮೊಹಮ್ಮದ್ ಮೊಹಿದ್ದಿನ್ (50) ಎಂದು ಗುರುತಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯನ್ನು ತಪಾಸಣೆ ಮಾಡಿದ ಸಂದರ್ಭ ಮಹಿಳೆ ಸ್ಯಾನಿಟರಿ ನ್ಯಾಪ್ಕಿನ್ನಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ಚಿನ್ನವು ಪೌಡರ್ ರೂಪದಲ್ಲಿದ್ದು 38,88,150 ರೂ. ಬೆಲೆಯುಳ್ಳದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಭಟ್ಕಳ ಮೂಲದ ಮೊಹಮ್ಮದ್ ಮೊಹಿದ್ದೀನ್ ಕೂಡ 14,63,490 ರೂ ಮೌಲ್ಯದ ಚಿನ್ನ ಅಕ್ರಮವಾಗಿ (ಗುದಧ್ವಾರದಲ್ಲಿಟ್ಟು) ಸಾಗಾಟ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ
ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 53.50 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನವನ್ನು ದೇಹದಲ್ಲಿರಿಸಿ ಸಾಗಾಟ ಮಾಡಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಿ, ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ