ಕರಾವಳಿ

ಕಿರಿಯರನ್ನು ಪ್ರೋತ್ಸಾಹಿಸಿ ಹಿರಿಯರನ್ನು ಗೌರವಿಸುವ ಮಣಿ ಕೃಷ್ಣಸ್ವಾಮಿ ಅಕಾಡಮಿಯ ಪ್ರಯತ್ನ ಶ್ಲಾಘನೀಯ : ಡಾ.ಡಿ.ವೀರೇಂದ್ರ ಹೆಗ್ಗಡೆ

Pinterest LinkedIn Tumblr

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡಮಿಯು ಫೆಬ್ರವರಿ 10ರಿಂದ 15ರ ತನಕ ನಡೆಸಿದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ನೀಡಿದ ಸಂದರ್ಭ ಡಾ ಡಿ ವೀರೇಂದ್ರ ಹೆಗ್ಗಡೆಯವರು ಅಕಾಡಮಿಯು ಕಳೆದ 10ವರ್ಷಗಳಿಂದ ಸತತವಾಗಿ ಯುವ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವ ಹಾಗೂ ಹಿರಿಯ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಸತ್ಸಂಪ್ರದಾಯವನ್ನು ಹಮ್ಮಿಕೊಂಡು ಬಂದಿದೆ. ಇದು ಅತ್ಯಂತ ಶ್ಲಾಘನೀಯವಾದುದು ಎಂದು ಅಭಿಪ್ರಾಯ ಪಟ್ಟರು.

‘ಯುವ ಕಲಾಮಣಿ’ ಪ್ರಶಸ್ತಿಯನ್ನು ಶ್ರೇಯಾ ಕೊಳತ್ತಾಯ, ‘ಎಂ ಕೆ ಮತ್ತು ಮಣಿ ವಾರ್ಷಿಕ ಪ್ರಶಸ್ತಿಯನ್ನು’ ಸುನಾದ ಕೃಷ್ಣ, ‘ಎ ಈಶ್ವರಯ್ಯ ವಾರ್ಷಿಕ ಪ್ರಶಸ್ತಿ’ಯನ್ನು ನಾಗೇಶ್ ಎ ಬಪ್ಪನಾಡು ಮತ್ತು ಹಿರಿಯ ಸಾಧಕ ಸನ್ಮಾನವನ್ನು ಕೆ ಯು ರಾಘವೇಂದ್ರ ರಾವ್ ಅವರಿಗೆ ಪ್ರದಾನ ಮಾಡಲಾಯಿತು.

ಸಭೆಯಲ್ಲಿ ಅಕಾಡಮಿಯ ಗೌರವಾಧ್ಯಕ್ಷರು ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಶೈಲೇಂದ್ರ ಅನಂತಪುರ ಉಪಸ್ಥಿತರಿದ್ದರು.

ಅಕಾಡಮಿಯ ಅಧ್ಯಕ್ಷ ಕ್ಯಾ ಗಣೇಶ್ ಕಾರ್ಣಿಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ ಕುಮಾರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಉಮಾ ಶಂಕರಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ವೈ ಜಿ ಶ್ರೀಲತಾ ಪ್ರಶಸ್ತಿ ಫಲಕವನ್ನು ಓದಿದರು. ಅಕಾಡಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್ ಧನ್ಯವಾದ ನೀಡಿದರು.

ಇದೇ ಸಂದರ್ಭ ಆನ್‌ಲೈನ್ ಮೂಲಕ ಸುಮಾರು ಒಂದು ವರ್ಷದಿಂದ 600ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ಸಂಘಟಿಸುವ ಮುಲಕ 1000ಕ್ಕೂ ಮೀರಿ ಕಲಾವಿದರಿಗೆ ವೇದಿಕೆ ಒದಗಿಸಿದ ಶ್ರೀವಿಭು ರಾವ್ ಇವರನ್ನು ಡಾ ಡಿ ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೊದಲು ಹೃಷಿತಾ ಕೇದಗೆ ಇವರಿಂದ ಹಾಡುಗಾರಿಕೆ ಕಛೇರಿ ನಡೆಯಿತು. ಇವರಿಗೆ ಚಿನ್ಮಯೀ ಸಿ ಎಸ್ ವಯಲಿನ್‌ನಲ್ಲಿ ಹಾಗೂ ನಿಕ್ಷಿತ್ ಟಿ ಪುತ್ತೂರು ಮೃದಂಗದಲ್ಲಿ ಸಹಕರಿಸಿದರು.

Comments are closed.