ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯಿತಿಯಲ್ಲಿ 14 ಮಂದಿ ಸದಸ್ಯರ ಪೈಕಿ 11 ಬಿಜೆಪಿ ಬೆಂಬಲಿತ ಹಾಗೂ 2 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದರೂ ಕೂಡ ಜೆಡಿಎಸ್ ಸದಸ್ಯರೋರ್ವರಿಗೆ ಅಧ್ಯಕ್ಷ ಸ್ಥಾನ ದಕ್ಕಿದೆ.
ಗ್ರಾ.ಪಂ.ಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ, ಮರವಂತೆ ಪಂಚಾಯ್ತಿಯಲ್ಲಿ 3 ನೇ ವಾರ್ಡಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ರುಕ್ಕು ಯಾನೆ ರುಕ್ಮಿಣಿ ಅವರಿಗೆ ಅಧ್ಯಕ್ಷ ಸ್ಥಾನ ನಿರಾಯಸವಾಗಿ ಸಿಕ್ಕಿದೆ.
ಇವರನ್ನು ಮರವಂತೆ ಗ್ರಾಮಪಂಚಾಯತಿ ಸದಸ್ಯರನ್ನಾಗಿ ಜೆಡಿಎಸ್ ಪಕ್ಷದಿಂದ ಅವಿರೋಧವಾಗಿ ಆಯ್ಕೆ ಮಾಡುವುದರ ಹಿಂದೆ ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಜೆಡಿಎಸ್ ಪಕ್ಷದ ವೀಕ್ಷಕರಾಗಿರುವ ಮನ್ಸೂರ್ ಇಬ್ರಾಹಿಂ ಮರವಂತೆ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ, ಪರಿಶಿಷ್ಟ ಪಂಗಡದ ಮುಖಂಡರುಗಳಾದ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು, ಶೇಖರ ಮರವಂತೆ, ಲಕ್ಷ್ಮಣ್ ಬೈಂದೂರು ಹಾಗೂ ಸುರೇಶ ಪೂಜಾರಿ, ಲಕ್ಷ್ಮಣ, ಎನ್. ಸುರೇಶ ಪೂಜಾರಿ, ರಘು ಪೂಜಾರಿ, ಸೋಮಯ್ಯ ದೇವಾಡಿಗ, ಆನಂದ್ ಪೂಜಾರಿ, ನಾಸಿರ್ ಮರವಂತೆ, ಜನಾರ್ದನ್ ಮರವಂತೆ, ಸದಾ ಪೂಜಾರಿ, ಭಾಸ್ಕರ್ ಪೂಜಾರಿ, ಶಾಮಲಾ, ಗಿರೀಶ್ ದೇವಾಡಿಗ ಅವರ ಸಹಕಾರದೊಂದಿಗೆ ಆಯ್ಕೆ ಮಾಡಲಾಗಿತ್ತು.