ಕರಾವಳಿ

ಬಹುನಿರೀಕ್ಷಿತ ತುಳು ಚಿತ್ರ “ಗಮ್ಜಾಲ್” ನಾಳೆ ತುಳುನಾಡಿನಾದ್ಯಂತ ಬಿಡುಗಡೆ: 1 ವರ್ಷದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ತುಳು ಚಿತ್ರ

Pinterest LinkedIn Tumblr

ಮಂಗಳೂರು, ಫೆಬ್ರವರಿ.18: ತುಳು ಭಾಷೆಯ 115ನೇ ಚಿತ್ರ “ಗಮ್ಜಾಲ್” ಫೆ. 19, ಶುಕ್ರವಾರದಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ.

ಒಂದು ವರ್ಷದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ತುಳು ಚಿತ್ರ “ಗಮ್ಜಾಲ್”ಆಗಿದ್ದು, ಫೆ. 19 ರಂದು ತುಳು ಚಿತ್ರ ರಂಗಕ್ಕೆ 50 ವರ್ಷ ತುಂಬಲಿದ್ದು , ಅದೇ ದಿನ ಗಮ್ಜಾಲ್ ಸಿನೆಮಾ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡದ ಪ್ರಮುಖರಾದ ಖ್ಯಾತ ನಟ, ಚಿತ್ರ ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಆರ್ . ಎಸ್ ಸಿನೆಮಾಸ್ ಲಾಂಛನದಲ್ಲಿ ಚಿತ್ರ ಮೂಡಿಬಂದಿದೆ. ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ಡ್ಯಾರೆಲ್ ಹಾಗೂ ಜೋಯೆಲ್ ಸಂಗೀತ ನೀಡಿದ್ದು, ರಾಹುಲ್ ವಸಿಷ್ಠ ಸಂಕಲನ, ನಿರಂಜನ್ ದಾಸ್ ಛಾಯಾಗ್ರಹಣ, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.

ಸಿನಿಮಾದಲ್ಲಿ ಗುರುಕಿರಣ್ ಅವರ ಹಾಡು ಈಗಾಗಲೇ ಹಿಟ್ ಆಗಿದ್ದು, ಬಿಡುಗಡೆಯಾದ 2 ಟ್ರೈಲರ್ ಗಳು ತುಂಬಾ ಸದ್ದು ಮಾಡಿದೆ. ಫೆ. 14ರಂದು ನಡೆದ ಪ್ರೀಮಿಯರ್ ಶೋ ನಲ್ಲಿ 3500ಕ್ಕೂ ಅಧಿಕ ಮಂದಿ ಪಾಲ್ಗೊಂಡು ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ ಎಂದವರು ತಿಳಿಸಿದರು.

ಕಳೆದ ವರ್ಷ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ “ಗಿರಿಗಿಟ್” ಚಿತ್ರದ ಮೂಲಕ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ ಅವರ ತಂಡದ ಎರಡನೇ ಚಿತ್ರ “ಗಮ್ಜಾಲ್”. ಅಗಿದ್ದು, ರೂಪೇಶ್ ಶೆಟ್ಟಿ ಅವರೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ.

ಹಿರಿಯ ರಂಗಭೂಮಿ ನಟ ಹಾಗು ಖ್ಯಾತ ಚಿತ್ರ ನಟ ನವೀನ್ ಡಿ.ಪಡೀಲ್ ಅವರು ಚಿತ್ರದ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ನವೀನ್ ಶೆಟ್ಟಿ, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು, ಸಂಗೀತ ನೀಡಿರುವ ಜೋಯೆಲ್ ರೆಬೆಲ್ಲೋ, ಸಂಕಲನಕಾರ ರಾಹುಲ್ ವಸಿಷ್ಠ, ಪ್ರಮುಖರಾದ ವಿಶ್ವನಾಥ್, ನಟ ಹರ್ಷ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ರಮಾಕಾಂತಿ ಹಾಗು ಎಲ್ಲಾ ಮಲ್ಟಿಪ್ಲೆಕ್ಸ್ , ಸುರತ್ಕಲ್ ನಲ್ಲಿ ನಟರಾಜ್ , ಉಡುಪಿಯಲ್ಲಿ ಕಲ್ಪನಾ , ಕಾರ್ಕಳದಲ್ಲಿ ರಾಧಿಕಾ ಹಾಗೂ ಪ್ಲಾನೆಟ್ , ಮಣಿಪಾಲದಲ್ಲಿ ಭಾರತ್ ಸಿನೆಮಾಸ್ ಹಾಗೂ ಐನಾಕ್ಸ್ , ಮೂಡಬಿದಿರೆಯಲ್ಲಿ ಅಮರಶ್ರೀ , ಸುಳ್ಯದಲ್ಲಿ ಸಂತೋಷ್ , ಬೆಳ್ತಂಗಡಿಯಲ್ಲಿ ಭಾರತ್ ಹಾಗೂ ಕಾಸರಗೋಡಿನ ಕೃಷ್ಣ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.

Comments are closed.