ಬೆಂಗಳೂರು: ಸ್ಯಾಂಡಲ್ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ. ಇಂದು (ಗುರುವಾರ) ಪರಿಷ್ಕ್ರತ ಆದೇಶ ಹೊರಡಿಸುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರ ಥಿಯೇಟರ್ ಈ ಹಿಂದೆ ನೀಡಿದ್ದ 50ರಷ್ಟು ಆಸನ ಭರ್ತಿಗೆ ನೀಡಿದ್ದ ಅವಕಾಶವನ್ನು ಮುಂದುವರೆಸುವುದಾಗಿ ಮಂಗಳವಾರದಂದು ಆದೇಶಿಸಿತ್ತು. ಈ ಆದೇಶದ ವಿರುದ್ಧ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಸಭೆ-ಸಮಾರಂಭ, ಮಾರುಕಟ್ಟೆ, ಬಸ್ ಗಳಲ್ಲಿನ ಜನದಟ್ಟಣೆಗೆ ಕಡಿವಾಣ ಹಾಕದೆ ಕೇವಲ ಥಿಯೇಟರ್ ಗಳ ಮೇಲೆ ಯಾಕೆ ಎಂದು ಪ್ರಶ್ನಿಸಿದ್ದರು. ಹಿರಿಯ ಕಲಾವಿದರಾದ ಶಿವರಾಜಕುಮಾರ್, ಪುನೀತ್, ತಾರಾ, ದ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಸರಕಾರದ ಗಮನಕ್ಕೆ ತಂದಿದ್ದರು. ನಿರ್ಮಾಪಕ, ನಿರ್ದೇಶಕರುಗಳು ಕೂಡ ಒಂದಾಗಿದ್ದರು.
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಲಾಗಿದೆ. ಸುಮಾರು 1 ಲಕ್ಷ ಮಂದಿ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಚಿತ್ರರಂಗದ ಬೇಡಿಕೆ ಮೇರೆಗೆ ಮುಂದಿನ ನಾಲ್ಕು ವಾರಗಳ ಅವಧಿಗೆ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.