ಕರಾವಳಿ

ರಕ್ತದಾನದಿಂದ ಹೃದಯಕ್ಕೆ ರಕ್ಷಣೆ, ರೋಗನಿರೋಧಕ ಶಕ್ತಿ ಹೆಚ್ಚಳ : ಡಾ. ಶರತ್ ಕುಮಾರ್

Pinterest LinkedIn Tumblr

ಮಂಗಳೂರು, ಜನವರಿ 20 : ರಕ್ತದಾನ ನಮ್ಮ ದೇಹದ ಅನಗತ್ಯ ಕೊಲೆಸ್ಟ್ರಾಲ್ ಹೊರಗೆ ಹಾಕುತ್ತದೆ ಮತ್ತು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ, ಇದು ನಮ್ಮ ಹೃದಯಕ್ಕೂ ಒಳ್ಳೆಯದು, ಅಂತೆಯೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ, ಎಂದು ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯ, ಮತ್ತು ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್ ಕುಮಾರ್ ರಾವ್. ಜೆ. ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್‍ಸಿಸಿ ವಿಭಾಗಗಳು ಹಾಗೂ ಲಯನ್ಸ್ ಕ್ಲಬ್ ಹೈಲ್ಯಾಂಡ್ ಸಹಯೋಗದೊಂದಿಗೆ ಮಂಗಳವಾರ ರವೀಂದ್ರ ಕಲಾಭವನದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬರ ರಕ್ತ ನಾಲ್ವರ ಜೀವ ಉಳಿಸಬಹುದು. ಅದರಲ್ಲೂ ನಿಯಮಿತ ರಕ್ತಪೂರಣದ ಅಗತ್ಯವಿರುವ ತಲಸ್ಸೇಮಿಯಾ (Thalassemia) ದಂತಹ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ರಕ್ತದ ತೀವ್ರ ಅಗತ್ಯತೆಯಿರುತ್ತದೆ, ಎಂದರು.

ಸುಮಾರು 217 ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಹೆಗ್ಗಳಿಕೆಯಿರುವ ಲಯನ್ಸ್ ಕ್ಲಬ್ ನ ಪ್ರಾದೇಶಿಕ ಸಲಹೆಗಾರ ಲಯನ್. ನಾಗೇಶ್ ಕುಮಾರ್, ರಕ್ತದಾನ ಜಾತಿ- ಧರ್ಮದ ಹಂಗಿಲ್ಲದ ಮಾನವೀಯ ಸೇವೆ, ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜಕಿ ಡಾ. ನಾಗರತ್ನ ಕೆ.ಎ, ರಕ್ತದಾನದಲ್ಲಿ ಎನ್ಎಸ್ಎಸ್ ಬೋಧಿಸುವ ಸೇವೆ, ಸದ್ಭಾವನೆ, ರಾಷ್ಟ್ರೀಯತೆ, ಏಕತೆ ಎಂಬ ಎಲ್ಲಾ ತತ್ವಗಳು ಅಡಗಿವೆ, ಎಂದರು.

ಪ್ರಾಂಶುಪಾಲ ಡಾ. ಎ. ಹರೀಶ ಮಾತನಾಡಿ, ಕೊವಿಡ್ ನಂತರ ಕಾಲೇಜಿಗೆ ಬರಲು ಆರಂಭಿಸಿರುವ ವಿದ್ಯಾರ್ಥಿಗಳು ರಕ್ತದಾನಕ್ಕೆ ತೋರಿಸಿದ ಉತ್ಸಾಹವನ್ನು ಮೆಚ್ಚಿಕೊಂಡರು. ಲಯನ್ಸ್ ಕ್ಲಬ್ (ಹೈಲ್ಯಾಂಡ್) ಅಧ್ಯಕ್ಷ ಲಯನ್ ಕೆ.ಎಸ್. ರಂಜನ್ ವಂದನಾರ್ಪಣೆಗೈದರು. ಎನ್ಸಿಸಿ (ನೌಕಾದಳ) ಅಧಿಕಾರಿ ಡಾ. ಯತೀಶ್ ಕುಮಾರ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಗಾಯತ್ರಿ, ಡಾ. ಸುರೇಶ್, ಕಾಲೇಜಿನ ಯುವ ರೆಡ್‍ಕ್ರಾಸ್ ಸಂಯೋಜಕ ಡಾ. ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ರಕ್ತದಾನ ಮಾಡಿ ಶಿಬಿರದ ಸದುಪಯೋಗಪಡಿಸಿಕೊಂಡರು.

Comments are closed.