ಕರಾವಳಿ

ಗೋಣಿ ಚೀಲದಲ್ಲಿ ತುಂಬಿಸಿ ಮಕ್ಕಳ ಅಪಹರಣಕ್ಕೆ ಯತ್ನಿಸಿದ ಮೂವರನ್ನು ಸೆರೆಹಿಡಿದ ಮಂಗಳೂರು ಪೊಲೀಸರು.

Pinterest LinkedIn Tumblr

ಮಂಗಳೂರು, ಜನವರಿ.16: ಜನವರಿ13ರಂದು ನಗರದ ಮೇರಿಹಿಲ್ ಸಮೀಪದ ಕೊಂಚಾಡಿ ದೇವಸ್ಥಾನದ ಮುಂಭಾಗ ಬೈಕಿನಲ್ಲಿ ಬಂದು ಮಕ್ಕಳನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21), ಕಾವೂರಿನ ರಕ್ಷಕ್ ಶೆಟ್ಟಿ (22) ಹಾಗು ಬೊಂದೆಲ್‌ನ ಅಲಿಸ್ಟರ್ ತಾವ್ರೋ (21) ಎಂದು ಹೆಸರಿಸಲಾಗಿದೆ.

ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ಮೂವರು ಮಕ್ಕಳು ಕೊಂಚಾಡಿಯ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಮಕ್ಕಳು ದೇವಳ ಪ್ರಾಂಗಣ ದಾಟಿ ಎದುರು ರಸ್ತೆಯಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ದೇವಸ್ಥಾನದಿಂದ ಬರುತ್ತಿದ್ದ ಮಕ್ಕಳಲ್ಲಿ ಓರ್ವನನ್ನು ಗೋಣಿ ಚೀಲದಲ್ಲಿ ತುಂಬಿಸಲು ಯತ್ನಿಸಿದ್ದಾರೆ.

ಆತ ತಪ್ಪಿಸಿಕೊಂಡಾಗ ದುಷ್ಕರ್ಮಿಗಳು ಮತ್ತೊಬ್ಬ ಬಾಲಕನನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಈ ಮಕ್ಕಳಲ್ಲಿ ಸ್ವಲ್ಪ ದೊಡ್ದವನಾದ ಬಾಲಕ ಅಪಹರಣಕಾರರತ್ತ ಕಲ್ಲು, ಮಣ್ಣು ಎಸೆದ್ದಾನೆ.

ಈ ವೇಳೆ ಸ್ಥಳದಲ್ಲಿದ್ದ ಕೆಲವರು ಬೊಬ್ಬೆ ಹಾಕಿದ್ದು, ಇದರಿಂದ ಅಪಾಯ ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಆರೋಪಿಗಳಿಗೆ ಗಾಂಜಾ ಜಾಲದ ನಂಟು:

ಬಾಲಕರ ಅಪಹರಣ ಯತ್ನ ಪ್ರಕರಣದಲ್ಲಿನ ಬಂಧಿತರಿಗೆ ಅಪರಾಧದ ಹಿನ್ನೆಲೆ ಇದೆ. ರಕ್ಷಕ್ ಶೆಟ್ಟಿ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಇನ್ನೋರ್ವ ಆರೋಪಿ ಅಲಿಸ್ಟರ್ ತಾವ್ರೋ ವಿರುದ್ಧ ಕಾವೂರು ಠಾಣೆಯಲ್ಲಿ ಮೂರು ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರನೇ ಆರೋಪಿ ರಾಹುಲ್ ವಿರುದ್ಧವೂ ಕಾವೂರು ಠಾಣೆಯಲ್ಲಿ ಕೇಸು ಇದೆ. ಎಲ್ಲ ಆರೋಪಿಗಳಿಗೆ ಗಾಂಜಾ ಜಾಲದ ನಂಟಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅಪರಾಧದ ಹಿನ್ನೆಲೆಯೂ ಇದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಯುಕ್ತರು ತಿಳಿಸಿದರು.

ನಗರದ ಯಾವುದೇ ಪ್ರದೇಶದಲ್ಲಿ ಯಾರೇ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡುಬಂದರೆ ಟೋಲ್ ಫ್ರೀ ನಂಬರ್ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಆಯುಕ್ತರು ಮನವಿ ಮಾಡಿದರು.

ತಮಾಷೆಗಾಗಿ ಎಂದು ಹೇಳಿಕೆ ನೀಡಿರುವ ಆರೋಪಿಗಳು:

ಆರೋಪಿಗಳು ಯೂಟ್ಯೂಬರ್ಸ್ ಎಂದು ಹೇಳಿಕೊಂಡಿದ್ದಾರೆ. ‘ಪ್ರಾಂಕ್’ ಮಾಡಲು ಬಾಲಕರ ಅಪಹರಣ ಯತ್ನ ನಡೆಸಿದೆವು ಎಂದು ಹೇಳಿಕೊಂಡಿದ್ದಾರೆ.ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರಾಂಕ್ ಮಾಡುವುದು ಅಪರಾಧವಾಗಿದೆ.

ಪ್ರಾಂಕ್ ಮಾಡುವ ಸಂದರ್ಭ ಮಕ್ಕಳು ಹೆದರಿ ಏನಾದರೂ ಅನಾಹುತ ಸಂಭವಿಸಿದರೆ ಯಾರೂ ಜವಾಬ್ದಾರಿ. ಪ್ರಾಂಕ್ ಮಾಡುವಾಗ ಸ್ನೇಹಿತರೇ ಕೂಡಿಕೊಂಡು ಮಾಡಿದ್ದಲ್ಲಿ ಸಮಸ್ಯೆ ಬರುವುದಿಲ್ಲ; ಆದರೆ ಸಾರ್ವಜನಿಕರನ್ನು ಬಳಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Comments are closed.