ಕರಾವಳಿ

ಭೀಕರ ರಸ್ತೆ ಅಪಘಾತ : ಗೋವಾಕ್ಕೆ ಪ್ರವಾಸ ಹೊರಟ್ಟಿದ್ದ ವೈದ್ಯರು ಸೇರಿದಂತೆ 11 ಮಂದಿ ಮೃತ್ಯು

Pinterest LinkedIn Tumblr

ಕರ್ನಾಟಕ / ಧಾರವಾಡ : ಸಂಕ್ರಾಂತಿ ಮಾರನೇ ದಿನವೇ ಧಾರವಾಡ ನಗರದ ಹೊರವಲಯದ ಇಟ್ಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಾವಣೆಗೆರೆ ಮೂಲದ 10 ಮಹಿಳೆಯರು ಸೇರಿ 11 ಜನ ಮೃತಪಟ್ಟಿದ್ದು, 4 ಜನ ಗಾಯಾಳುಗಳು ಗಂಭೀರ ಗಾಯಗೊಂಡಿದ್ದಾರೆ.

ಧಾರವಾಡದ ಇಟ್ಟಿಗಟ್ಟಿ-ಯರಿಕೊಪ್ಪ‌ ಮಧ್ಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಟಿಟಿ ಚಾಲಕ ಸೇರಿದಂತೆ ಹನ್ನೊಂದು ಜನ ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಬಹುತೇಕರು ವೈದ್ಯಕೀಯ ವೃತ್ತಿಯಲ್ಲಿದ್ದರು ಮತ್ತು ಇವರೆಲ್ಲರೂ ಶಾಲಾ ಸ್ನೇಹಿತರಾಗಿದ್ದು, ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದರು. ಅಪಘಾತದಲ್ಲಿ ದಾವಣಗೆರೆಯ ಕೆಲವು ವೈದ್ಯಕೀಯ ವೃತ್ತಿಪರರ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ.

ಇಂದು ನಸುಕಿನ ಜಾವ 3ಕ್ಕೆ ಟಿಟಿಯಲ್ಲಿ ದಾವಣಗೆರೆ ಬಿಟ್ಟಿದ್ದ ಇವರೆಲ್ಲ ಧಾರವಾಡ ನಗರಕ್ಕೆ ಆಗಮಿಸಿ ಉಪಹಾರ ಮುಗಿಸಿ ಪಣಜಿ ಪ್ರವಾಸ ಮುಂದುವರೆಸುವವರಿದ್ದರು. ಆದರೆ ಧಾರವಾಡ ನಗರ ಪ್ರವೇಶಿಸುವ ರಸ್ತೆ ಎರಡ್ಮೂರು ಕಿ.ಮಿ ಇರೋ ಮುಂಚೆಯೇ ಈ ಅಪಘಾತಕ್ಕೀಡಾಗಿದ್ದಾರೆ.

ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಪಣಜಿಗೆ‌ ತೆರಳುತ್ತಿದ್ದು, ಲಾರಿ ಬೆಳಗಾವಿಯಿಂದ ಬರುತ್ತಿದ್ದಾಗ ಈ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋ ಟ್ರಾವೆಲರ್ನಲ್ಲಿದ್ದ ಕನಷ್ಠ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ 10 ಮಹಿಳೆಯರ ಪೈಕಿ ನಾಲ್ವರು ವೈದ್ಯರಾಗಿದ್ದರೆ, ಇತರರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಶಾಲಾ ಸ್ನೇಹಿತರಾಗಿದ್ದು, ಗೋವಾಕ್ಕೆ ಒಂದು ದಿನದ ಟ್ರಿಪ್ ಹೊರಟ್ಟಿದ್ದರು.

ನಾಲ್ವರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಮೂಲದ ಇವರೆಲ್ಲ ಚೀಟಿ ಹಣ ಸಂಗ್ರಹದ ತಂಡವರಾಗಿದ್ದು, ಎಲ್ಲರೂ ವೈದ್ಯಕೀಯ ಕ್ಷೇತ್ರದವರಾಗಿದ್ದಾರೆ. ಬೆಳಗಾವಿ, ಬೆಂಗಳೂರು, ಧಾರವಾಡದ ಸ್ನೇಹಿತರೆಲ್ಲ ಗೋವಾದ ಪಣಜಿಯಲ್ಲಿ ಸೇರುವ ಪ್ಲ್ಯಾನ್ ಮಾಡಿಕೊಂಡಿದ್ದರು.

ನಾವು ಧಾರವಾಡದ ಬೃಂದಾವನ್ ಹೋಟೆಲ್‌ನಲ್ಲಿ ಗೋವಾಗೆ ತೆರಳುತ್ತಿದ್ದ ತಂಡದ ಸದಸ್ಯರಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದೆವು. ಆದರೆ ಹೆದ್ದಾರಿಯಲ್ಲಿ ಅಪಘಾತವಾಗಿದ್ದು ತಿಳಿದು ನಾವು ಆಘಾತಕ್ಕೊಳಗಾಗಿದ್ದೇವೆ. ಮೃತರು ಶಾಲಾ ಸಮಯದಿಂದಲೂ ಉತ್ತಮ ಸ್ನೇಹಿತರಾಗಿದ್ದರು ಮತ್ತು ನಮ್ಮನ್ನು ಭೇಟಿಯಾಗಲು ಉತ್ಸುಕರಾಗಿದ್ದರು ಎಂದು ಧಾರವಾಡದ ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದಾರೆ.

ಮೃತಪಟ್ಟವರ ಪೈಕಿ ರಜನಿ, ಪ್ರೀತಿ, ಪರಮಜ್ಯೋತಿ, ವೀಣಾ,ರಾಜೇಶ್ವರಿ, ಮಂಜುಳಾ ಎಂದು ಗುರುತಿಸಲಾಗಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು ಸಂತಾಪ ಸೂಚಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಚಿತ್ರ ನಿರೀಕ್ಷಿಸಿ..

Comments are closed.