ಕರಾವಳಿ

ನಾಳೆ ಕೋವಿಸೀಲ್ಡ್ ಲಸಿಕೆ ವಿತರಣೆ ಆರಂಭ: ಲಸಿಕೆ ನೀಡುವಾಗ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಸೂಚನೆ

Pinterest LinkedIn Tumblr

ಮಂಗಳೂರು, ಜನವರಿ. 15: ಕೋವಿಡ್- 19 ನಿರೋಧಕಾ ಲಸಿಕೆಯನ್ನು ಜನವರಿ 16ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಜಿಲ್ಲೆಯ ಎಲ್ಲಾ‌ಲಸಿಕಾ ಕೇಂದ್ರದಲ್ಲಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕೋವಿಡ್ 19 ಲಸಿಕಾ ಶಿಬಿರದ ಪೂರ್ವ ಸಿದ್ದತೆಯ ಕುರಿತ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಜನವರಿ 16ರಿಂದ ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದು, ವ್ಯಾಕ್ಸಿನೇಷನ್ ಪಡೆಯುವ ಫಲಾನುಭವಿಗಳನ್ನು ವೀಕ್ಷಣೆಯಲ್ಲಿಟ್ಟು ಅಡ್ಡ ಪರಿಣಾಮದ ಕುರಿತು ಖಾತ್ರಿ ಪಡಿಸಿಕೊಳ್ಳಿ ಎಂದರು.

ಮಂಗಳೂರು ಕೇಂದ್ರ‌ಕ್ಕೆ ಲಸಿಕೆ ತಲುಪಲಿದ್ದು, ಅದನ್ನು ಜಿಲ್ಲೆಯ 6 ಕೇಂದ್ರಗಳಿಗೆ ತಲುಪಿಸುವ ತಯಾರಿ ನಡೆದಿದೆ ಎಂದರು.

ಕೋವಿಡ್ ಲಸಿಕೆ ಉದ್ಘಾಟನೆಯ ದಿನದಂದು ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.ಈವರೆಗೆ ಯಾವುದೇ ಅಡ್ಡ ಪರಿಣಾಮ ಯಾವುದೇ ಭಾಗದಲ್ಲಿ ಕಂಡುಬಂದಿಲ್ಲ ಎಂದರು.

ಲಸಿಕೆ ನೀಡುವ ಮುನ್ನ ಫಲಾನುಭವಿಗಳನ್ನು ವೈದ್ಯಕೀಯ ತಪಾಸಣೆ ನಡೆಸಿ, 18 ವರ್ಷ ಕ್ಕಿಂತ ಮೇಲ್ಪಟ್ಟವರನ್ನು ಅತ್ಯಂತ ಸೂಕ್ಷ್ಮವಾಗಿ ತಪಾಸಣೆ ನಡೆಸಬೇಕು. ಫಲಾನುಭವಿಗಳಿಗೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಜಾಗೃತಿ ವಹಿಸಬೇಕು‌ ಎಂದರು.

ವ್ಯಾಕ್ಸಿನ್ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಸಮರ್ಪಕವಾಗಿ ಬಳಕೆಯಾಗುವಂತೆ ನಿಗಾ ವಹಿಸಬೇಕು ಹಾಗೂ ಇನ್ನಿತರ ಅಗತ್ಯ ವೈದ್ಯಕೀಯ ಉಪಕರಣಗಳು ಲಭ್ಯವಿರಬೇಕು. ಅದರ ಜೊತೆಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ವ್ಯಾಕ್ಸಿನ್ ಪಡೆದ ವ್ಯಕ್ತಿಗೆ ಯಾವುದೇ ತೊಂದರೆ ಕಂಡು ಬಂದಲ್ಲಿ ಸೂಕ್ತ ತಪಾಸನಣೆ ನಡೆಸಿ ತುರ್ತು ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಕೋವಿಡ್ ವ್ಯಾಕ್ಸಿನ್ ಉಪಯೋಗಿಸುವ ಬಗ್ಗೆ ಮತ್ತು ಲಸಿಕೆ ಪಡೆದ ನಂತರ ಅದರ ನಂತರ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಮೇಲ್ವಿಚಾರಣೆಯು ಜಿಲ್ಲಾಡಳಿತ, ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮತ್ತಿತರ ಸಂಬಂಧ ಪಟ್ಟ ಇಲಾಖೆಗಳ ಸಹಯೋಗದಲ್ಲಿ ಜರುಗಲಿರುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.