ಅಂತರಾಷ್ಟ್ರೀಯ

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ: ಪ್ರಧಾನಿ ಮೋದಿಯಿಂದ ಕೊರೊನಾ ಲಸಿಕೆಗೆ ಇಂದು ಚಾಲನೆ

Pinterest LinkedIn Tumblr

ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಅಭಿಯಾನವಾದ ಕೊರೊನಾ ಲಸಿಕೆ ಅಭಿಯಾನಕ್ಕೆ ಇಂದು (ಶನಿವಾರ) ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

ದೇಶಾದಾದ್ಯಂತ ಶನಿವಾರ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಶುಕ್ರವಾರ ದೆಹಲಿಯ ನಿರ್ಮಾಣ್‌ ಭವನದಲ್ಲಿರುವ ಕೊರೊನಾ ನಿಯಂತ್ರಣ ಕೊಠಡಿಗೆ ತೆರಳಿ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದೇಶದಾದ್ಯಂತ ಒಟ್ಟು 3,006 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಎಲ್ಲ ಕೇಂದ್ರಗಳ ಮಧ್ಯೆ ಆನ್‌ಲೈನ್‌ ಸಂಪರ್ಕವಿದೆ ಎನ್ನಲಾಗಿದೆ.

ಮೊದಲ ದಿನ ಪ್ರತಿ ಕೇಂದ್ರದಲ್ಲಿಯೂ ನೂರು ಮಂದಿ ಕೊರೊನಾ ಲಸಿಕೆ ಪಡೆಯಲಿದ್ದಾರೆ. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳ 1.65 ಕೋಟಿ ಡೋಸ್‌ಗಳನ್ನು ಸರ್ಕಾರವು ಖರೀದಿಸಿದ್ದು ಈಗಾಗಲೇ ಎಲ್ಲ ರಾಜ್ಯಗಳಿಗೆ ತಲುಪಿಸಲಾಗಿದೆ. ಕೊರೊನಾ ವಿರುದ್ಧಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ.

ಕೇಂದ್ರವು ರಾಜ್ಯಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಲಸಿಕೆ ನೀಡಿಕೆ ಪ್ರಕ್ರಿಯೆ ಸ್ಥಿರ ಪ್ರಕ್ರಿಯೆಯಾಗಿ ಮಾರ್ಪಟ್ಟ ಬಳಿಕ ಕೇಂದ್ರಗಳನ್ನು ಹೆಚ್ಚಿಸಬೇಕು. ದಿನದ ನಿಗದಿಗಿಂತ ಹೆಚ್ಚು ಮಂದಿಗೆ ಲಸಿಕೆ ಹಾಕುವ ಅವಸರ ಬೇಡ. ಗರಿಷ್ಠ 10 ದಿನದಲ್ಲಿ ಮೊದಲ ಹಂತದ ಅಭಿಯಾನ ಮುಕ್ತಾಯವಾಗಬೇಕು. ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಬೇಕು. ಶೇ 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್‌ಗಳೆಂದು ತೆಗೆದಿರಿಸಬೇಕು ಎಂದು ಸೂಚನೆ ನೀಡಿದೆ.

Comments are closed.