ಕರಾವಳಿ

ಜನವರಿ 15 ಮಕರ ಸಂಕ್ರಮಣದಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿಸಮರ್ಪಣಾ ಅಭಿಯಾನಕ್ಕೆ ಚಾಲನೆ. ಸಾತ್ವಿಕ ದೇಣಿಗೆಗೆ ವಿಹಿಂಪ ಕರೆ

Pinterest LinkedIn Tumblr

ಮಂಗಳೂರು : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯೋಜನೆಯ ಅನ್ವಯ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನವು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಜನವರಿ 15 ಮಕರ ಸಂಕ್ರಮಣದಿಂದ ಪ್ರಾರಂಭವಾಗಿ ಫೆಬ್ರವರಿ 05 ರ ತನಕ 20 ದಿನಗಳ ಕಾಲ ಕರ್ನಾಟಕದ ಎಲ್ಲಾ ಗ್ರಾಮ, ಹೋಬಳಿ, ಹಳ್ಳಿ, ನಗರಗಳಲ್ಲಿ ನಡೆಯಲಿದೆ ಎಂದು ವಿಹಿಂಪ ದ.ಪ್ರಾಂತ ಕಾರ್ಯಾಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್ ತಿಳಿಸಿದ್ದಾರೆ.

ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದು ಪರಿಷದ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರು ವಿಭಾಗದಲ್ಲಿ ಈ ಅಭಿಯಾನವನ್ನು ಯಶಸ್ವಿ ಮಾಡುವ ದೃಷ್ಟಿಯಿಂದ ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಅಭಿಯಾನಕ್ಕೆ ಪೂರ್ವ ತಯಾರಿ ನಡೆದಿದ್ದು ಈಗಾಗಲೇ ಸಾವಿರಾರು ಕಾರ್ಯಕರ್ತರು ಅಭಿಯಾನದ ಸಿದ್ದತೆಯಲ್ಲಿ ತೊಡಗಿದ್ದಾರೆ.

ಕಾರ್ಯಕರ್ತರು ನಮ್ಮ ಮನೆ ಮನೆಗೆ ಶ್ರೀ ರಾಮಮಂದಿರ ನಿಧಿ ಸಮರ್ಪಣೆ ಅಭಿಯಾನಕ್ಕೆ ಬಂದಾಗ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ಸಾತ್ವಿಕ ದೇಣಿಗೆಯನ್ನು ನೀಡುವಂತೆ ಸಮಸ್ತ ಸಮಾಜ ಬಾಂಧವರಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರವಾಗಿ ಕಳಕಳಿಯಿಂದ ವಿನಂತಿಸುತಿದ್ದೇವೆ ಎಂದು ಹೇಳಿದರು.

ಅಯೋಧ್ಯೆ ಹೋರಾಟ :

ಧರ್ಮವೇ ಅವತಾರವೆತ್ತಿ ಧರೆಗೆ ಬಂದ ಶ್ರೀರಾಮಚಂದ್ರ, ಅಗಣಿತ ಗುಣನಿಧಿ, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವು ರಾಮಭಕ್ತರ ಕನಸು ನನಸಾಗುತ್ತಿರುವುದು ನಿಜಕ್ಕೂ ಅತ್ಯಂತ ಸಂತೋಷ, 1528 ರಲ್ಲಿ ದುಷ್ಟ ಬಾಬರನ ಸೇನಾಧಿಪತಿ ಮೀರ್ ಬಾಕಿರ್ ರಾಮ ಜನ್ಮಭೂಮಿಯಲ್ಲಿದ 7 ಅಂತಸ್ತಿನ ಮಂದಿರವನ್ನು ಕೆಡವಿ ಅಲ್ಲಿ ಗುಂಬಸ್ ನಂತಹ ಕಟ್ಟಡ ನಿರ್ಮಿಸಿ ಅದಕ್ಕೆ ಜನ್ಮ ಸ್ಥಾನ ಮಜೀದ್ ಎಂದು ಹೆಸರಿಟ್ಟಿದ್ದರು. ಈ ಮಂದಿರಕ್ಕಾಗಿ ಹಿಂದೂ ಸಮಾಜವು ಕಳೆದ 492 ವರ್ಷಗಳಿಂದ ಸತತವಾಗಿ ರಾಮಭಕ್ತರು ಹೋರಾಟ ನಡೆಸುತ್ತಲೇ ಬಂದಿದ್ದಾರೆ, ಈ ವರೆಗೆ ನಡೆದ 76 ಸಂಘರ್ಷದಲ್ಲಿ 4 ಲಕ್ಷಕ್ಕೂ ಅಧಿಕ ರಾಮಭಕ್ತರು ಬಲಿದಾನ ಗೈದಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಪುನರಪಿ ಹೋರಾಟಗಳು ಪ್ರಾರಂಭವಾಯಿತು, 1984 ರಿಂದ ನಡೆದ ಸೂತ್ರಬದ್ಧ ಸರಣಿ ಅಭಿಯಾನಗಳ ಫಲ ಸ್ವರೂಪವಾಗಿ ಸಂಪೂರ್ಣ ವಿಶ್ವವೇ ಕಂಡು ಕೇಳರಿಯದಂತಹ ಬೃಹತ್ ಆಂದೋಲನವಾಗಿ, ಇದೆಲ್ಲದರ ಪರಿಣಾಮ 1989 ನವೆಂಬರ್ 9 ರಂದು ಶ್ರೀ ರಾಮ ಜನ್ಮಭೂಮಿಯಲ್ಲಿ ಪೂಜ್ಯ ಸಂತರ ಸಮಕ್ಷಮದಲ್ಲಿ ಮಂದಿರದ ಅಡಿಗಲ್ಲು ಪ್ರತಿಷ್ಠಾಪನೆ.

ವಿಶ್ವ ಹಿಂದು ಪರಿಷತ್ತಿನ ಪೂಜ್ಯ ಅಶೋಕ್ ಸಿಂಘಾಲ್ ಜೀಯವರ ಸಮರ್ಥ ನೇತೃತ್ವದಲ್ಲಿ ರಾಮ ಶಿಲಾ ಪೂಜನ ಯಾತ್ರೆ,ರಾಮಜ್ಯೋತಿ ಯಾತ್ರೆ, ರಾಮಜಾನಕಿ ರಥ ಯಾತ್ರೆ ಮತ್ತು 1990 – 92 ರ ಕರ ಸೇವೆ ಯಶಸ್ವಿಯಾಗಿ ನಡೆದು. 70 ವರ್ಷಗಳ ಸುಧೀರ್ಘ ನ್ಯಾಯಾಲಯ ಪ್ರಕ್ರಿಯೆಯಲ್ಲಿ ಸಿಲುಕಿ ಇತಿಹಾಸ ವಾಸ್ತವಾಂಶಗಳ ಮತ್ತು ಇತರ ಆಧಾರಗಳ ಮೇಲೆ ಅಂತಿಮ ತೀರ್ಪು, 9 ನವೆಂಬರ್ 2019 ರಂದು ಸರ್ವೋಚ್ಚ ನ್ಯಾಯಾಲಯ ನೀಡಿತು.ನ್ಯಾಯಾಲಯದ ತೀರ್ಪಿನಂತೆ 5 ಫೆಬ್ರವರಿ 2020 ರಂದು “ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ” ಎನ್ನುವ ಟ್ರಸ್ಟ್ ರಚಿಸಿ ಪ್ಲಾಸ್ಟಿಕ್ ಟಾರ್ಪಾಲಿನಲ್ಲಿದ ರಾಮನ ವಿಗ್ರಹವನ್ನು ತಾತ್ಕಾಲಿಕ ಮಂದಿರಕ್ಕೆ ಸ್ಥಳಾಂತರಿಸಲಾಯಿತು.

5 ಆಗಸ್ಟ್ 2020 ರಾಮ ಭಕ್ತರ ಶತ ಶತಮಾನಗಳ ಕನಸು ಸಹಕಾರಗೊಳ್ಳುವ ಶುಭ ಮುಹೂರ್ತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನ್ಯ ಸರಸಂಘಚಾಲಕರು ಮತ್ತು ಗೌರವಾನ್ವಿತ ಪ್ರಧಾನಮಂತ್ರಿಗಳ ಸಕ್ಷಮದಲ್ಲಿ ಮಂದಿರದ ಭೂಮಿಪೂಜೆ ನಡೆಯಿತು. ದೇಶದ ವಿವಿಧ ಭಾಗಗಳಿಂದ ತಂದಿದ್ದ ಪುಣ್ಯ ಕ್ಷೇತ್ರಗಳ ಮೃತ್ತಿಕೆ ಮತ್ತು 3000 ಹೆಚ್ಚು ಪವಿತ್ರ ನದಿಗಳ ತೀರ್ಥ ಈ ಭೂಮಿಪೂಜೆಯಲ್ಲಿ ಸಮರ್ಪಣೆಯಾಯಿತು. ಇವುಗಳಿಂದ ಸಂಪೂರ್ಣ ಭಾರತವೇ ಆಧ್ಯಾತ್ಮಿಕ ರೂಪದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಾಯಿತು.

ರಾಮ ಮಂದಿರ ರಾಷ್ಟ್ರ ಮಂದಿರ :

ಶ್ರೀರಾಮ ಮಂದಿರ ನಿರ್ಮಾಣ ಭಾರತದ ಗೌರವದ ಪ್ರತೀಕ. ನಮ್ಮ ದೇಶದ ಹೆಗ್ಗುರುತು ದೇಶದ ಪ್ರತಿಯೊಂದು ಜಾತಿ, ಮತ ಪಂಥ ಪ್ರದೇಶ ಮತ್ತು ಭಾಷೆಯ ಜನರ ಬೆಂಬಲದೊಂದಿಗೆ ಅಯೋಧ್ಯೆಯ ಶ್ರೀರಾಮ ಮಂದಿರವು ರಾಷ್ಟ್ರ ಮಂದಿರದ ಸ್ವರೂಪವನ್ನು ಪಡೆಯಲಿದೆ. ಕೇವಲ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮಾತ್ರವಲ್ಲ ನಮ್ಮ ರಾಷ್ಟ್ರೀಯತೆಯ ಪುನರುತ್ಥಾನದ ಸಂಕೇತವಾಗಿದೆ.

ಇಡೀ ಜಗತ್ತಿನಲ್ಲಿ ಸಾವಿರಾರು ರಾಜ ಮಹಾರಾಜರು ಆಗಿ ಹೋಗಿದ್ದಾರೆ ಆದರೆ ಇವತ್ತಿಗೂ ಜನ ಮಾನಸದಲ್ಲಿ ರಾಮರಾಜ್ಯ ಬೇಕು ಶ್ರೀರಾಮನಂತಹ ರಾಜ ಇರಬೇಕು ಅನ್ನುವಂತಹ ಅಪೇಕ್ಷೆ ಇದೆ. ರಾಮರಾಜ್ಯದ ಸಂಕಲ್ಪದಂತೆ ಪ್ರಸ್ತುತ ಸಮಾಜದಲ್ಲಿರುವ ಮೇಲು ಕೀಳು, ಬಡತನ, ಆರೋಗ್ಯ ಶಿಕ್ಷಣ, ಕೌಶಲ್ಯದ ನ್ಯೂನ್ಯತೆಗಳನ್ನು ನಿರ್ಮೂಲನೆ ಮಾಡುವ ಮಹಿಳೆಯ ಘನತೆಯನ್ನು ಮರುಸ್ಥಾಪಿಸುವ ಭಯೋತ್ಫಾದನೆಯನ್ನು ನಿರ್ಮೂಲನೆ ಮಾಡುವ ವೇಧದ ಗುರಿಯಾದ ಸರ್ವೇ ಭವಂತು ಸುಖಿನಃ ಎಂಬ ಉದ್ದೇಶದಿಂದ ಕೂಡಿದೆ ಎಂದು ಪ್ರೊ ಎಂ ಬಿ ಪುರಾಣಿಕ್ ತಿಳಿಸಿದರು.

ಪ್ರತೀ ಮನೆ ಮನೆಗೆ ಕಾರ್ಯಕರ್ತರು ಭೇಟಿ ನೀಡಿ ದೇಣಿಗೆ ಸಂಗ್ರಹ:

ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಮಾತನಾಡಿ, ಮಂಗಳೂರು ವಿಭಾಗದ ಪ್ರತಿ ಜಿಲ್ಲೆಯ ನಗರ, ವಾರ್ಡ್ ಮಟ್ಟದಲ್ಲಿ ಸುಮಾರು 4000 ಬೂತ್ ಸಮಿತಿಗಳು ರಚನೆಯಾಗಿದ್ದು, ಪ್ರತೀ ಬೂತ್ ನಲ್ಲಿ 25 ಕಾರ್ಯಕರ್ತರ ತಂಡಗಳು ರಚನೆಯಾಗಿದ್ದು ಕಾರ್ಯಕರ್ತರು ಪ್ರತೀ ಮನೆ ಮನೆಗೆ ಭೇಟಿ ನೀಡಿ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಿದ್ದಾರೆ. ಮಂಗಳೂರು ವಿಭಾಗದ ಎಲ್ಲಾ ಹಿಂದೂಗಳ ಮನೆಗೆ ತೆರಳಿ ಕಾರ್ಯಕರ್ತರು ಸಂಪರ್ಕ ಮಾಡಲಿದ್ದಾರೆ

ರೂಪಾಯಿ 10/- ರೂಪಾಯಿ 100/- ರೂಪಾಯಿ 1000/- ಮುದ್ರಿತ ಕೂಪನ್ ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ, 2000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯಿದೆಯ 80 G ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯಬಹುದಾಗಿದೆ.

ಈ ಹಣ ಸಂಗ್ರಹಣೆಯ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಮತ್ತು ಸಂಗ್ರಹವಾದ ಹಣವನ್ನು 48 ಗಂಟೆಯ ಒಳಗಡೆ ತೀರ್ಥ ಕ್ಷೇತ್ರ ಟ್ರಸ್ಟಿನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ, ಬ್ಯಾಂಕ್ ಒಫ್ ಬರೋಡ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈ ಹಣವನ್ನು ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ರಾಮ ಮಂದಿರದ ವಿನ್ಯಾಸ :

ಒಟ್ಟು 2.7 ಎಕರೆ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಾಣವಾಗಲಿದೆ.ಮಂದಿರ ನಿರ್ಮಾಣದ ವಿಸ್ತೀರ್ಣ ಒಟ್ಟು ವಿಸ್ತೀರ್ಣ 57400 ಚದರ ಅಡಿ, ಒಟ್ಟು ಉದ್ದ 360 ಅಡಿ, ಒಟ್ಟು ಅಗಲ 235 ಅಡಿ, ಒಟ್ಟು ಎತ್ತರ 161 ಅಡಿ ಒಟ್ಟು ಮೂರು ಅಂತಸ್ತುಗಳ ಈ ಮಂದಿರದ ಪ್ರತೀ ಅಂತಸ್ತಿನ ಎತ್ತರ 20 ಅಡಿ, ಭವ್ಯವಾದ, ಅತ್ಯಂತ ಸುಂದರ ಮತ್ತು ಬಲಿಷ್ಠ ಮಂದಿರದ ನಿರ್ಮಾಣ ಕಾರ್ಯ ಈಗಾಗಲೇ ನಡೆಯುತ್ತಿದೆ.

ನೆಲ ಮಾಳಿಗೆಯಲ್ಲಿ 160 ಕಂಬಗಳು, ಮೊದಲನೇ ಮಹಡಿಯಲ್ಲಿ 132 ಕಂಬಗಳು, ಎರಡನೇ ಮಹಡಿಯಲ್ಲಿ 72 ಕಂಬಗಳು ಇರುತ್ತವೆ. ಮಂದಿರ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞ ಶಾಲೆ, ವೇದ ಪಾಠ ಶಾಲೆ, ಸತ್ಸಂಗ ಭವನ, ಧರ್ಮ ಶಾಲೆ, ಪ್ರಧರ್ಶನಾಲಯ, ವಸತಿಗೃಹ, ಭೋಜನ ಶಾಲೆ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿದೆ.

ಈ ಮಂದಿರದ ನಿರ್ಮಾಣದ ಕೆಲಸವನ್ನು L & T ಕಂಪನಿಯು ವಹಿಸಿಕೊಂಡಿದ್ದು, ಟಾಟಾ ಕಾನ್ಸುಲ್ಟೆನ್ಸಿ ಸರ್ವಿಸ್ ಈ ಮಂದಿರ ನಿರ್ಮಾಣಕ್ಕೆ ತನ್ನ ಅಭಿಯಂತರರನ್ನು ನಿಯೋಜಿಸಲಿದೆ. ರಾಮ ಮಂದಿರದ ನೀಲಿನಕ್ಷೆಯು ಈಗಾಗಲೇ ಬಿಡುಗಡೆಯಾಗಿದೆ

ಶ್ರೀ ರಾಮ ಮಂದಿರ ನಿರ್ಮಾಣ ವೈಶವಿಕವಾಗಿ ಸಮಸ್ತ ಹಿಂದೂಗಳ ಹೆಗ್ಗುರಿಯಾಗಿದ್ದು 2024 ರ ಒಳಗಾಗಿ ಶ್ರೀರಾಮ ಲಲ್ಲಾ ನನ್ನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಅಂದಾಜಿಸಲಾಗಿದ್ದು ಈ ಧರ್ಮಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಶ್ರೀರಾಮನ ಸೇವೆ ಮಾಡುವ, ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡುವ ಅವಕಾಶ ಕಲ್ಪಿಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದ್ದು ನಮ್ಮ ಮಂಗಳೂರು ವಿಭಾಗದ ಪ್ರತಿಯೊಬ್ಬ ರಾಮಭಕ್ತರು ನಿಧಿಯನ್ನು ಸಮರ್ಪಣೆ ಮಾಡುವ ಮೂಲಕ ಈ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕೆಂದು ಶರಣ್ ಪಂಪವೆಲ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Comments are closed.