ರಾಷ್ಟ್ರೀಯ

‘ಕೋವಿಡ್-19 ಲಸಿಕೆಯ ಪರಿಣಾಮದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಕೋವಿಡ್-19 ಲಸಿಕೆ ಎರಡು ಡೋಸ್ ಗಳ ಮಧ್ಯೆ 28 ದಿನಗಳ ಅಂತರವಿದ್ದು, ಲಸಿಕೆಯ ಪರಿಣಾಮ ಎರಡನೇ ಡೋಸ್ ನೀಡಿದ 14 ದಿನಗಳ ನಂತರ ಕಂಡುಬರಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎರಡನೇ ಡೋಸ್ ನೀಡಿದ 14 ದಿನಗಳ ನಂತರವಷ್ಟೇ ಅದರ ಪರಿಣಾಮ ಗೊತ್ತಾಗಲಿದೆ. ಹೀಗಾಗಿ ಅಷ್ಟು ದಿನ ಲಸಿಕೆ ಹಾಕಿಸಿಕೊಂಡವರು ಜಾಗರೂಕರಾಗಿರಬೇಕು. ಲಸಿಕೆ ಹಾಕಿದ ತಕ್ಷಣ ನಾವು ಸುರಕ್ಷಿತರು ಎಂಬ ತೀರ್ಮಾನಕ್ಕೆ ಬರಬಾರದು, ಎರಡೂ ಲಸಿಕೆಗಳ ಮಧ್ಯೆ 28 ದಿನಗಳ ಅಂತರವಿರುತ್ತದೆ ಎಂದರು.

ಜನವರಿ 16ರಿಂದ ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನ ಆರಂಭವಾಗಲಿದ್ದು ಆರಂಭದಲ್ಲಿ ಸುಮಾರು 3 ಕೋಟಿ ಆರೋಗ್ಯಸೇವೆ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಸುಮಾರು 1 ಕೋಟಿ ಆರೋಗ್ಯ ವಲಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ. ನಂತರ ಸುಮಾರು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುವುದು. ವಯಸ್ಸನ್ನು ನೋಡಿಕೊಂಡು ಸುಮಾರು 27 ಕೋಟಿ ಮಂದಿಗೆ ನೀಡಲಾಗುತ್ತದೆ. ಆರೋಗ್ಯ ವಲಯ ಕಾರ್ಯಕರ್ತರು ಮತ್ತು ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡುವ ಮುಂಚೂಣಿ ಕಾರ್ಯಕರ್ತರ ಲಸಿಕೆ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಭಾರತದಲ್ಲಿ ಇತ್ತೀಚೆಗಷ್ಟೇ ಎರಡು ಲಸಿಕೆಗಳಾದ ಆಕ್ಸಫರ್ಡ್ ವಿಶ್ವವಿದ್ಯಾಲಯದ ಸೆರಂ ಇನ್ಸ್ ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಮತ್ತು ಭರತ್ ಬಯೋಟೆಕ್ ಕಂಪೆನಿಯ ಕೊವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಎರಡೂ ಲಸಿಕೆಗಳನ್ನು ಸಾವಿರಾರು ಮಂದಿಯ ಮೇಲೆ ಪ್ರಯೋಗ ಮಾಡಲಾಗಿದ್ದು ಸುರಕ್ಷಿತವಾಗಿದೆ ಎಂದು ನೀತಿ ಆಯೋಗ ಸದಸ್ಯ ಡಾ ವಿ ಕೆ ಪೌಲ್ ತಿಳಿಸಿದ್ದಾರೆ.

Comments are closed.