ಕರಾವಳಿ

ಸಮುದ್ರ ಮಧ್ಯೆ ಮೀನುಗಾರಿಕೆ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟ : 1 ಮಂದಿ ಮೀನುಗಾರರ ರಕ್ಷಣೆ

Pinterest LinkedIn Tumblr

ಮಂಗಳೂರು: ಮಂಗಳೂರಿನ ಎಂಪಿಟಿಯಿಂದ 140 ಮೈಲಿ ದೂರದಲ್ಲಿ ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಬೋಟ್‌ನಲ್ಲಿ ಅಪಾಯದಲ್ಲಿದ್ದ 11 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ.

ತಮಿಳುನಾಡು ಮೂಲದ ಮೀನುಗಾರಿಕಾ ನೌಕೆ ಮಂಗಳೂರಿನಿಂದ 140 ನಾಟಿಕಲ್ ಮೈಲಿ ಪಶ್ಚಿಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಆ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬೋಟ್‌ನಲ್ಲಿ ಬೆಂಕಿ ಆವರಿಸಿದೆ.

ತಮಿಳುನಾಡಿನ ಐಎಫ್‌ಬಿ ಎವಿಕೆಎಂ ಬೋಟ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಮುಂಬೈನ ಕಡಲ ರಕ್ಷಣಾ ಸಹಕಾರ ಕೇಂದ್ರ (ಎಂಆರ್‌ಸಿಸಿ) ಮಾಹಿತಿ ಬಂದಿದ್ದು, ತಕ್ಷಣವೇ ಎಂಆರ್‌ಸಿಸಿಯ ಸಚೇತ್‌ ಮತ್ತು ಸುಜೀತ್‌ ಹಡಗುಗಳು ರಕ್ಷಣಾ ಕಾರ್ಯಾಚರಣೆ ಧಾವಿಸಿದವು.

ಜೊತೆಗೆ ಅನಾಹುತಕ್ಕೀಡಾದ ಬೋಟ್‌ನ ಸನಿಹದಲ್ಲಿದ್ದ ಸರಕು ಸಾಗಣೆ ಹಡಗುಗಳಿಗೂ ಮಾಹಿತಿ ರವಾನಿಸಲಾಯಿತು. 3 ಗಂಟೆಯಲ್ಲಿಯೇ ಕರಾವಳಿ ಕಾವಲು ಪಡೆಯ ತಂಡವೂ ಸ್ಥಳಕ್ಕೆ ಧಾವಿಸಿತು.

ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು. ಬೋಟ್ ಪತ್ತೆ ಮಾಡಿದ್ದಲ್ಲದೆ ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬಲಾಯಿತು.

ಘಟನೆಯಲ್ಲಿ ಗಾಯಗೊಂಡಿರುವ ಓರ್ವ ಮೀನುಗಾರ ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.