ಕರಾವಳಿ

ಮಂಗಳೂರಿನಲ್ಲಿ ಎಲ್ಲಾ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ : ನೂತನ ಪೊಲೀಸ್ ಕಮಿಷನರ್ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಜನವರಿ 02: ಅಕ್ರಮ ಮರಳುಗಾರಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಜೊತೆಗೆ ಸರ ಅಪಹರಣ, ಕಳ್ಳತನ ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಈಗಾಗಲೇ ನಗರದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಅವರು, ಶುಕ್ರವಾರ ಸಂಜೆ ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಎನ್ ಶಶಿಕುಮಾರ್ ಅವರು ಅಧಿಕಾರ ಸ್ವೀಕರಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಮಂಗಳೂರಿನಲ್ಲಿ ಪ್ರಸ್ತುತ ಇರುವ ಬೀಟ್ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಲವರ್ಧನೆ ಮಾಡುವೆ ಎಂದರು.

ನೂತನ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್

ಕೊರೋನ ನಿಯಂತ್ರಣ ಕಾರ್ಯದಲ್ಲಿ ಪೊಲೀಸರು ಹೆಚ್ಚು ತೊಡಗಿಸಿಕೊಂಡಿದ್ದರಿಂದ ಬೀಟ್ ವ್ಯವಸ್ಥೆ ಅಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರಬಹುದು. ಬೀಟ್ ವ್ಯವಸ್ಥೆಯನ್ನು ಮತ್ತೆ ಬಲಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ.

ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಠಾಣೆಗಳ ಸಹಿತ 22 ಪೊಲೀಸ್ ಠಾಣೆಗಳಿದ್ದು 1,000ದಷ್ಟು ಸಿಬಂದಿಗಳಿದ್ದಾರೆ. ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ಜತೆಯಲ್ಲಿ ಸೇರಿಸಿ ತಂಡವಾಗಿ ಕೆಲಸ ಮಾಡಿ ಸಾರ್ವಜನಿಕರ ಸುರಕ್ಷತೆಗೆ ಆತಂಕ ಬಾರದಂತೆ ಕೆಲಸ ಮಾಡುತ್ತೇವೆ. ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದೊಂದಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.

ನಗರದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆ ಬಗ್ಗೆ ತಿಳಿದಿದೆ. ಇಂತಹ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸದೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಚಾರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಮನ ಹರಿಸಲಾಗುವುದು ಎಂದು ನೂತನ ಕಮಿಷನರ್ ಹೇಳಿದರು.

ಆರಂಭದಲ್ಲಿ ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರಿಗೆ ನಿರ್ಗಮನ ಕಮಿಷನರ್ ವಿಕಾಸ್ ಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ.ಗಾಂವ್ಕರ್ ಉಪಸ್ಥಿತರಿದ್ದರು.

Comments are closed.