ಕರಾವಳಿ

ನಗರದ ವಿವಿಧ ದೈವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಅವಹೇಳನಕಾರಿ ಬರಹದ ನಕಲಿ ನೋಟು ಪತ್ತೆ

Pinterest LinkedIn Tumblr

ಮಂಗಳೂರು : ಮಂಗಳೂರಿನ ವಿವಿಧ ದೈವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಕೀಡಿಗೇಡಿಗಳು ನಕಲಿ ನೋಟುಗಳಲ್ಲಿ ಬರೆದ ಅವಹೇಳನಕಾರಿ ಬರಹದ ನೋಟುಗಳು ಪತ್ತೆಯಾಗಿದೆ.

ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಬಬ್ಬುಸ್ವಾಮಿ ಕ್ಷೇತ್ರ ಮತ್ತು ಸಮೀಪದ ಇನ್ನಿತರ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕೀಡಿಗೇಡಿಗಳು ನಕಲಿ ನೋಟುಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆದು ಹಾಕಿರುವ ಬರಹ ಪತ್ತೆಯಾಗಿದೆ. ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದಲ್ಲೂ ಈ ಘಟನೆ ಬೆಳಕಿಗೆ ಬಂದಿದೆ.

ಕಳೆದ ಗುರುವಾರ ದೈವಸ್ಥಾನದ ಕಾಣಿಕೆ ಡಬ್ಬಿ ತೆರೆಯುವ ವೇಳೆ ಈ ಬರಹವುಳ್ಳ ನೋಟು ಮತ್ತು ಚೀಟಿ ಪತ್ತೆಯಾಗಿದೆ. ಇದರಲ್ಲಿ ಪ್ರಚೋದನಕಾರಿ ಬರಹಗಳನ್ನು ನೋಟಿನಲ್ಲಿ ಬರೆಯಲಾಗಿದೆ. ನೋಟಿನ ಗಾಂಧೀಜಿ ಚಿತ್ರವನ್ನೂ ವಿರೂಪ ಮಾಡಲಾಗಿದೆ.

ನಗರದ ಕೆಲ ದೈವಸ್ಥಾನಗಳಲ್ಲಿ ಇದೇ ರೀತಿಯಲ್ಲಿ ಅವಹೇಳನಕಾರಿ ಬರಹ ಬರೆದಿರುವ ಕೃತ್ಯ ನಡೆದಿದ್ದು, ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ ಸೇರಿದಂತೆ ನಗರದ ಮೂರು ದೈವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿದೆ ಎನ್ನಲಾಗಿದೆ.

ಕ್ರೈಸ್ತ ಧರ್ಮ ಪ್ರತಿಪಾದಿಸಿ ಬರಹ ಬರೆದಿರುವ ದುಷ್ಕರ್ಮಿಗಳು , ಹಿಂದೂ ಧರ್ಮವನ್ನು ಅವಹೇಳನ ಮಾಡುವುದರ ಜೊತೆಗೆ ಬಗವಾನ್ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಶೆಟ್ಲೆಗ್ರಾಮ ಬಾಬುಗುಡ್ಡೆ ಇದರ ಕಾಣಿಕೆ ಡಬ್ಬಿಗೆ ಅಸಹ್ಯ ವಸ್ತುಗಳನ್ನು ಹಾಕುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೇರೆದಿದ್ದಾರೆ.

ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಬಾಬುಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ಊರ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ನಗರ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಭರತ್ ಕುಮಾರ್ ಎಸ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರತೀಂದ್ರನಾಥ್ ಎಚ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ, ವಿಶ್ವಹಿಂದು ಪರಿಷತ್, ಬಜರಂಗದಳ ಅತ್ತಾವರ ಚಕ್ರಪಾಣಿ ಶಾಖೆ ಮತ್ತು ಛತ್ರಪತಿ ಶಾಖೆ ಬಾಬುಗುಡ್ಡ ಶಾಖೆ ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರಕರಣದ ಈ ಬಗ್ಗೆ ದೈವಸ್ಥಾನದ ಕಮಿಟಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಕೋಮು ಸೂಕ್ಶ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ನಡೆದ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳ ಬಂಧನವಾಗುವರೆಗೂ ಹೋರಾಟ ನಡೆಸುವುದಾಗಿ ದೈವಸ್ಥಾನದ ಮುಖಂಡರು ತಿಳಿಸಿದ್ದಾರೆ.

Comments are closed.